ಉಡುಪಿ | ನ.25ರಿಂದ ಬೀಡಿ ಕಾರ್ಮಿಕರಿಂದ ಅನಿರ್ಧಿಷ್ಟವಾದಿ ಅಹೋರಾತ್ರಿ ಧರಣಿ

ಸಾಂದರ್ಭಿಕ ಚಿತ್ರ
ಉಡುಪಿ, ನ.22: ಬಡ ಬೀಡಿ ಕಾರ್ಮಿಕರಿಗೆ ಕಾನೂನು ಬದ್ಧ ವೇತನ ನೀಡದ ಬೀಡಿ ಮಾಲಕರ ವಿರುದ್ಧ ಅನಿರ್ಧಿಷ್ಟವಾಧಿ ಅಹೋರಾತ್ರಿ ಧರಣಿ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಉಮೇಶ್ ಕುಂದರ್ ಹಾಗೂ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಕೋಶಾಧಿಕಾರಿ ಬಲ್ಕೀಸ್ ತಿಳಿಸಿದ್ದಾರೆ.
ನ.25ರಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮಂದೆ ಧರಣಿ ಮತ್ತು ನ.28ರಂದು ಸಾವಿರಾರು ಬೀಡಿ ಕಾರ್ಮಿಕರು ಮಂಗಳೂರು ಸಹಾಯ ಕಾರ್ಮಿಕ ಕಮೀಷನರ್ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಕಾನೂನು ಬದ್ದ ವೇತನ ಜಾರಿಗೆ ಮತ್ತು 7 ವರ್ಷಗಳ ಬಾಕಿ ವೇತನ ಕೂಡಲೇ ಪಾವತಿಗಾಗಿ ಅಗ್ರಹಿಸಿ ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರು ಅನಿರ್ದಿಷ್ಟವಾದಿ ಅಹೋರಾತ್ರಿ ಧರಣಿ ನಡೆಯಲಿದೆ.
2024ರ ಎ.1ರಿಂದ ಪ್ರತಿ 1,000 ಬೀಡಿಗೆ ಕರ್ನಾಟಕ ಸರಕಾರ ನಿಗದಿಗೊಳಿಸಿದಂತೆ ಕನಿಷ್ಠ ಕೂಲಿ ಡಿ.ಎ. ಸೇರಿ ಪ್ರತಿ 1,000 ಬೀಡಿಗೆ 301.92ರೂ.ನಂತೆ ಬೀಡಿ ಮಾಲಕರು ಕಾರ್ಮಿಕರಿಗೆ ನೀಡಬೇಕಿದ್ದರೂ ನೀಡುತ್ತಿಲ್ಲ. ಈ ಕನಿಷ್ಠ ಕೂಲಿ ಸರಕಾರ ಪ್ರತಿ 1,000 ಬೀಡಿಗೆ 270ರೂ. ಕನಿಷ್ಠ ಕೂಲಿ ಹಾಗೂ ಡಿ.ಎ. 2024ರ ಎ.1ರಿಂದ 287.04ರೂ.ನಂತೆ ವೇತನ ನೀಡಬೇಕಿದ್ದರೂ ಮಾಲಕರು ನೀಡಿರುವ ವೇತನ 2025ರ ಮಾ.31ತನಕ ಪ್ರತಿ 1,000 ಬೀಡಿಗೆ ಕೇವಲ 263.80 ಮಾತ್ರ. ಪ್ರತಿ 1,000 ಬೀಡಿ ವೇತನದಲ್ಲಿ 23.24ರೂ.ನಂತೆ ಬಾಕಿ ಮಾಡಿದ್ದಾರೆ.
2018 ಎ.1ರಿಂದ 2025ರ ಮಾ.31ತನಕ ಕೂಡ ಸರಕಾರ ನಿಗದಿ ಪಡಿಸಿದ ವೇತನದಲ್ಲಿ ಪ್ರತಿ 1,000 ಬೀಡಿಗೆ 39.98ರೂ. ವೇತನ ಬಾಕಿ ಮಾಡಿ ಕಾರ್ಮಿಕರನ್ನು ಬೀಡಿ ಮಾಲಕರು ವಂಚಿಸಿದ್ದಾರೆ. ವರ್ಷದಲ್ಲಿ 1 ಲಕ್ಷ ಬೀಡಿ ಕಟ್ಟಿದರೂ ತಲಾ ಸಾವಿರಾರು ರೂಪಾಯಿ ಬೀಡಿ ಕಾರ್ಮಿಕರ ವೇತನ ಬಾಕಿ ಆಗಿದೆ. ಬೀಡಿ ಮಾಲಕರ ಪರವಾಗಿ ಇವತ್ತು ಸರಕಾರ ಕಾರ್ಮಿಕರ ವೇತನ ಹಿಮ್ಮುಖವಾಗಿ ನಿಗದಿಗೊಳಿಸಿ ಆದೇಶ ಮಾಡಿರುವುದು ಬೀಡಿ ಕಾರ್ಮಿಕರಿಗೆ ಮಾಡಿರುವ ಮೋಸ ಎಂದು ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಆರೋಪಿಸಿದ್ದಾರೆ.







