ಉಡುಪಿ | ನಿರಂತರ ರಕ್ತದಾನದಿಂದ ಉತ್ತಮ ಆರೋಗ್ಯ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ, ನ.16: ಪ್ರಸ್ತುತ ಕಾಲ ಘಟ್ಟದಲ್ಲಿ ರಕ್ತದ ಬೇಡಿಕೆ ವಿಫುಲವಾಗಿದ್ದು, ವ್ಯಕ್ತಿ ಅನಾರೋಗ್ಯ ಪೀಡಿತನಾದಾಗ ಅಪಘಾತಕ್ಕೀಡಾದಾಗ ತುರ್ತು ರಕ್ತದ ಅವಶ್ಯಕತೆ ನಿರಂತರವಾಗಿದ್ದು, ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹ ಮಾಡಿದಾಗ ಪೂರೈಕೆ ಸುಲಭವಾಗುತ್ತದೆ. ಹಾಗೆಯೇ ಸತತವಾಗಿ ರಕ್ತದಾನ ಮಾಡುವುದರಿಂದ ದಾನಿಯು ಅರೋಗ್ಯ ಕರವಂತನಾಗುತ್ತಾನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ನೆಸ್ಫಿಟ್ ಜಿಮ್ ಮಣಿಪಾಲ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಸಹಕಾರದಲ್ಲಿ ರವಿವಾರ ಮಣಿಪಾಲ ಕೆಎಂಸಿಯ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ.ಗಣೇಶ್ ಮೋಹನ್ ವಹಿಸಿದ್ದರು. ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಮಣಿಪಾಲ ಎಂಐಟಿಯ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಬಾಲಕೃಷ್ಣ ಮದ್ದೋಡಿ, ಕಸ್ತೂರ್ಬಾ ಆಸ್ಪತ್ರೆಯ ಸುರಕ್ಷಾ ಅಧಿಕಾರಿ ಕ್ಲಿಂಗ್ ಜಾನ್ಸನ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಹಾಗೂ ರಕ್ತದಾನ ಶಿಬಿರದ ಮುಖ್ಯ ರೂವಾರಿ ವೆಲ್ನೆಸ್ ಜಿಮ್ನ ತಿಲಕ್ ಶೆಟ್ಟಿ, ರಕ್ತ ಕೇಂದ್ರದ ಸವಿನ ಹಾಗೂ ಅಮಿತ ಶೆಟ್ಟಿ ಉಪಸ್ಥಿತರಿದ್ದರು.
ಸಾಜನ್ ಸತೀಶ್ ಸಾಲ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ್ ವಂದಿಸಿದರು.







