ಉಡುಪಿ | ಚಂಡೀಗಢ ಮುಖ್ಯ ಕಾರ್ಯದರ್ಶಿಗೆ ನ.15ರಂದು ಹುಟ್ಟೂರ ಅಭಿನಂದನೆ
ಉಡುಪಿ, ನ.12: ಪ್ರಸ್ತುತ ಚಂಡೀಗಢದ ಮುಖ್ಯ ಕಾರ್ಯದರ್ಶಿಯಾಗಿರುವ ಹಿರಿಯಡ್ಕ ಮೂಲದ ಹಿರಿಯ ಐಎಎಸ್ ಅಧಿಕಾರಿ ಎಚ್.ರಾಜೇಶ್ ಪ್ರಸಾದ್ ಅವರಿಗೆ ನ.15ರಂದು ಸಂಜೆ 4:00ಗಂಟೆಗೆ ಅಭಿನಂದನಾ ಸ್ವಾಗತ ಸಮಿತಿಯ ವತಿಯಿಂದ ಹುಟ್ಟೂರ ಅಭಿನಂದನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಈ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಎಂಜಿಎಂ ಕಾಲೇಜಿನ ವಿಶ್ವಸ್ಥ ಮಂಡಳಿ ಅಧ್ಯಕ್ಷ ರಾದ ಟಿ.ಸತೀಶ್ ಯು.ಪೈ ಅಧ್ಯಕ್ಷತೆ ವಹಿಸಲಿದ್ದು, ಮಣಿಪಾಲ ಮಾಹೆಯ ಸಹ ಕಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಸನ್ಮಾನಿಸಿ ಅಭಿನಂದಿಸುವರು ಎಂದು ಕುಯಿಲಾಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ.ಸುನಿಲ್ಕುಮಾರ್, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಎಸ್ಪಿ ಹರಿರಾಮ್ ಶಂಕರ್, ಸಿಇಓ ಪ್ರತೀಕ್ ಬಾಯಲ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಕೆ.ರಘುಪತಿ ಭಟ್ ಹಾಗೂ ಇತರರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂಜಿಎಂ ಕಾಲೇಜು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಜಿಲ್ಲಾ ಮರಾಟಿ ಸಮಾಜ ಸೇವಾಸಂಗದ ಅಧ್ಯಕ್ಷ ಕೆ.ಟಿ.ನಾಯ್ಕ್, ವಿನಯ ಚೇರ್ಕಾಡಿ ಉಪಸ್ಥಿತರಿದ್ದರು.







