ಉಡುಪಿ | ಪ್ರಧಾನಿ ಭೇಟಿ ಸಮಯದಲ್ಲಿ ಬದಲಾವಣೆ : 40 ನಿಮಿಷ ಮುಂಚಿತವಾಗಿ ಆಗಮಿಸಲಿರುವ ಮೋದಿ

ಉಡುಪಿ, ನ.27: ಪ್ರಧಾನಿ ನರೇಂದ್ರ ಮೋದಿ ನ.28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, ಅವರು ಉಡುಪಿಗೆ ನಿಗದಿತ ಸಮಯಕ್ಕಿಂತ 40 ನಿಮಿಷ ಮುಂಚಿತವಾಗಿ ಆಗಮಿಸಲಿದ್ದಾರೆ.
ನರೇಂದ್ರ ಮೋದಿ ಬೆಳಗ್ಗೆ 11.05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಆದಿಉಡುಪಿ ಹೆಲಿಪ್ಯಾಡ್‌ಗೆ ಬೆಳಗ್ಗೆ 11.35ಕ್ಕೆ ಬಂದು ಇಳಿದು, 12ಗಂಟೆಗೆ ಮಠ ತಲುಪುವ ಬಗ್ಗೆ ಸಮಯ ನಿಗದಿಯಾಗಿತ್ತು. ಇದೀಗ ಅದರಲ್ಲಿ ಬದಲಾವಣೆಯಾಗಿ ಮೋದಿ ಬೆಳಗ್ಗೆ 11ಗಂಟೆಗೆ ಆದಿಉಡುಪಿಗೆ ಆಗಮಿಸಿ 11ಗಂಟೆಯಿಂದ 11.30ರವರೆಗೆ ರೋಡ್ ಶೋ ನಡೆಸಲಿದ್ದಾರೆ. ಮಠದ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 1ಗಂಟೆಗೆ ಹೊರಡಲಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪೊಲೀಸರಿಂದ ರಿಹರ್ಸಲ್ :
ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸರು ಇಂದು ಬೆಳಗ್ಗೆ ಉಡುಪಿ ನಗರದಲ್ಲಿ ರಿಹರ್ಸಲ್ ನಡೆಸಿದರು.
ಆದಿಉಡುಪಿ ಹೆಲಿಪ್ಯಾಡ್, ರೋಡ್ ಶೋ, ಕೃಷ್ಣಮಠ ಮತ್ತು ಸಮಾವೇಶ ಸ್ಥಳದ ಭೇಟಿಯ ರಿಹರ್ಸಲ್ ನಡೆಸಲಾಯಿತು. ಸುಮಾರು 20-30 ವಾಹನಗಳಲ್ಲಿ ಈ ಪೂರ್ವಾಭ್ಯಾಸ ಮಾಡಲಾಯಿತು. ಈ ಸಂದರ್ಭದಲ್ಲಿ ಆದಿಉಡುಪಿಯಿಂದ ಬನ್ನಂಜೆ, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗದಲ್ಲಿ ಸಂಪೂರ್ಣ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು.
ಮೋದಿ ಸಾಗುವ ಮಾರ್ಗದಲ್ಲಿ ಮತ್ತು ಕಾರ್ಯಕ್ರಮ ನಡೆಯುವ ವೇದಿಕೆಯ ಬಗ್ಗೆ ಕೆಲ ಬದಲಾವಣೆಯನ್ನು ಕೂಡ ಮಾಡಲಾಗಿದೆ. ನಗರದ ಎಲ್ಲೆಡೆ ಪೊಲೀಸ್ ಸರ್ಪಗಾವಲು ಇರಿಸಿದ್ದು, ವ್ಯಾಪಾಕ ತಪಾಸಣೆ ನಡೆಸಲಾಗುತ್ತಿದೆ.







