ಉಡುಪಿ: ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಮಗು ಮೃತ್ಯು

ಸಾಂದರ್ಭಿಕ ಚಿತ್ರ | PC : PTI
ಉಡುಪಿ, ಜೂ.5: ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಒಂದು ವರ್ಷದ ಮಗು ಮೃತಪಟ್ಟ ಘಟನೆ ಉಡುಪಿ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ನಡೆದಿದೆ.
ಪುತ್ತೂರು ಗ್ರಾಮದ ಬಾಡಿಗೆ ಮನೆ ನಿವಾಸಿ ಅಯ್ಯಪ್ಪ ಎಂಬವರ ಹೆಣ್ಣು ಮಗು ಕಾಳಮ್ಮ(1) ಮೃತಪಟ್ಟಿದೆ. ಅಯ್ಯಪ್ಪ ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಇವರ ಪತ್ನಿ ಬುಧವಾರ ಬೆಳಗ್ಗೆ ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದರು ಎನ್ನಲಾಗಿದೆ.
ವಾಪಸ್ ಮನೆಗೆ ಬಂದು ನೋಡಿದಾಗ ಜೋಳಿಗೆ ಕಟ್ಟಿದ್ದ ಸೀರೆ ಕುತ್ತಿಗೆ ಸುತ್ತಿಕೊಂಡು ಮಗು ಮೃತಪಟ್ಟಿರುವುದು ಕಂಡುಬಂದಿದೆ. ಮಗು ಜೋಲಿಗೆಯಿಂದ ಕೆಳಗಿಳಿಯಲು ಹೋಗಿ ಅಥವಾ ನಿದ್ರಾ ಸ್ಥಿತಿಯಲ್ಲಿ ಜೋಲಿಗೆಯಿಂದ ಬಿದ್ದು ಉಸಿರುಕಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





