ಮಗು ಅಕ್ರಮ ಮಾರಾಟ ಪ್ರಕರಣ: ಉಡುಪಿಯಲ್ಲಿ ವೈದ್ಯ ಸಹಿತ ಇಬ್ಬರ ಬಂಧನ

ಡಾ.ಕೆ.ಸುರೇಂದ್ರ ಕಾಮತ್ | ಎಸ್.ಪ್ರಕಾಶ್
ಉಡುಪಿ, ಜೂ.22: ಒಂದು ತಿಂಗಳ ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ವೈದ್ಯರು ಸೇರಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಕಾಮತ್ ನರ್ಸಿಂಗ್ ಹೋಮ್ ನ ವೈದ್ಯ ಡಾ.ಕೆ.ಸುರೇಂದ್ರ ಕಾಮತ್(76) ಹಾಗೂ ಸಂತೆಕಟ್ಟೆ ನೇಜಾರಿನ ರಾಜೀವ ನಗರ ನಿವಾಸಿ ಎಸ್.ಪ್ರಕಾಶ್(50) ಬಂಧಿತ ಆರೋಪಿಗಳು.
ಜೂ.19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ದೂರವಾಣಿ ಕರೆ ಮಾಡಿ ಸಂತೆಕಟ್ಟೆ ನೇಜಾರಿನ ದಂಪತಿ ಪ್ರಕಾಶ್ ಹಾಗೂ ಪೂರ್ಣಿಮಾ ಎಂಬವರು ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ತಂದು ಯಾವುದೇ ಕಾನೂನಾತ್ಮಕ ಪ್ರತಿಕ್ರಿಯೆಗಳಿಲ್ಲದೆ ಅನಧಿಕೃತವಾಗಿ ಸಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಅದರಂತೆ ಉಡುಪಿ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರೊಂದಿಗೆ ಜೂ.19ರಂದು ಪ್ರಕಾಶ್ ಮನೆಗೆ ಭೇಟಿ ನೀಡಿದ್ದು, ಆಗ ಒಂದು ತಿಂಗಳ ಹೆಣ್ಣು ಮಗು ಹಾಗೂ ಪೂರ್ಣಿಮಾ ಅವರ ಅಕ್ಕ ಲಕ್ಷ್ಮೀ ಮನೆಯಲ್ಲಿ ಹಾಜರಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಅನುಮಾನಾಸ್ಪದ ಹೇಳಿಕೆ ನೀಡಿದ್ದರು ಎಂದು ದೂರಲಾಗಿದೆ.
ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗ ಎಸ್.ಪ್ರಕಾಶ್ ಮತ್ತು ಪೂರ್ಣಿಮಾ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗಿಲ್ಲ. ಈ ಕಾರಣದಿಂದ ಅವರು ಉಡುಪಿ ಕಾಮತ್ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಲಕ್ಷ್ಮೀ ಅವರ ಸ್ನೇಹಿತರಿಂದ ಉಡುಪಿ ಕಾಮತ್ ನರ್ಸಿಂಗ್ ಹೋಮ್ ನಲ್ಲಿ ಮಗು ಇರುವ ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿನ ವೈದ್ಯ ಡಾ.ಕೆ.ಸುರೇಂದ್ರ ಕಾಮತ್ ಬಳಿ ಪ್ರಕಾಶ್ ಮತ್ತು ಪೂರ್ಣಿಮಾ ಮಗುವನ್ನು ನೀಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ಡಾ.ಕೆ.ಸುರೇಂದ್ರ ಕಾಮತ್ ಒಪ್ಪಿ ಒಂದು ತಿಂಗಳ ಹಿಂದೆ ಹೆಣ್ಣು ಮಗುವನ್ನು ಆರೋಪಿ ದಂಪತಿಗೆ ನೀಡಿ, ಮಗುವಿನ ಜನನ ಪ್ರಮಾಣ ಪತ್ರವನ್ನು ಮಾಡಿಕೊಟ್ಟಿದ್ದರು. ನಂತರ ಮಗುವಿನ ಜನನ ಪ್ರಮಾಣ ಪತ್ರವನ್ನು ಉಡುಪಿ ನಗರಸಭೆಯಲ್ಲಿ ಪಡೆದಿದ್ದು, ಮಗುವಿನ ಜೈವಿಕ ಪೋಷಕರು ಯಾರು ಎಂದು ತಿಳಿದಿರುವುದಿಲ್ಲ ಹಾಗೂ ಮಗುವಿನ ಬಗ್ಗೆ ಯಾವುದೇ ಮಾಹಿತಿಗಳು ತಿಳಿದಿಲ್ಲ ಎಂದು ದಂಪತಿ ತಿಳಿಸಿದ್ದಾರೆ.
ಆರೋಪಿಗಳು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಒಳಸಂಚು ರೂಪಿಸಿ ಮಗುವಿನ ಜನನ ಪ್ರಮಾಣ ಹಾಗೂ ತಂದೆ-ತಾಯಿಯ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಗುವನ್ನು ಕಳ್ಳ ಸಾಗಣೆಯ ಮೂಲಕ ಮಾರಾಟ ಮಾಡಿ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅದರಂತೆ ಆರೋಪಿಗಳ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.






