ಉಡುಪಿ | ಉದ್ಯಾವರ ಗ್ರಾಪಂನ ಕೆಂಪುಪಟ್ಟಿಯ ವಿರುದ್ಧ ಲೋಕಾಯುಕ್ತದಲ್ಲಿ ದಾವೆ

ಉಡುಪಿ, ಡಿ.22: ಉದ್ಯಾವರ ಗ್ರಾಮ ಪಂಚಾಯತ್ ಕಳೆದ ನಾಲ್ಕು ವರ್ಷಗಳಿಂದ ಗ್ರಾಮದ ನಾಗರಿಕರೊಬ್ಬರಿಗೆ ಮನೆ ನಿರ್ಮಾಣಕ್ಕೆ ನೀಡುವ 9/11ಎ ದಾಖಲೆ ಹಾಗೂ ಮನೆಯ ಡೋರ್ ನಂ ಅನ್ನು ನೀಡದೇ ಸತಾಯಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದೆ.
ಉದ್ಯಾವರ ಗ್ರಾಪಂನ ನಾಗರಿಕರಾದ ವಸಂತ ಶೇರಿಗಾರ್ ಅವರಿಗೆ ಮನೆ ನಿರ್ಮಾಣಕ್ಕೆ ಗ್ರಾಪಂನಿಂದ ನೀಡಬೇಕಾದ ಪರವಾನಿಗೆ ದಾಖಲೆಗಳನ್ನು ನೀಡದೇ ಸತಾಯಿಸುತ್ತಿರುವ ಬಗ್ಗೆ ಪ್ರತಿಷ್ಠಾನ ಕಳೆದ ವಾರ ಪತ್ರಿಕಾಗೋಷ್ಠಿ ಕರೆದು ಸಮಗ್ರ ಮಾಹಿತಿಯನ್ನು ಬಹಿರಂಗ ಪಡಿಸಿತ್ತು.
ಈ ವಿಷಯದಲ್ಲಿ ಗ್ರಾಪಂನ ಪಿಡಿಓ ಆದ ಎಚ್.ಆರ್.ರಮೇಶ್ ಅವರು ಮೇಲಾಧಿಕಾರಿ ಉಡುಪಿ ಜಿಪಂನ ಸಿಇಓ ಪ್ರತೀಕ್ ಬಾಯಲ್ ಹಾಗೂ ಮೇಲ್ಮನವಿ ಪ್ರಾಧಿಕಾರ ನೀಡಿದ ಸ್ಪಷ್ಟ ಆದೇಶಗಳನ್ನೂ ಧಿಕ್ಕರಿಸುತ್ತಿರುವ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಹಾಗೂ ವಸಂತ ಶೇರಿಗಾರ್ ಅವರು ಕಳವಳ, ಆತಂಕ ವ್ಯಕ್ತಪಡಿಸಿದ್ದರು.
ಆದರೆ ಈಗಲೂ ಜಿಲ್ಲಾ ಪಂಚಾಯತ್ ಹಾಗೂ ಗ್ರಾಪಂನಿಂದ ಯಾವುದೇ ಸ್ಪಂದನೆ ಬಾರದಿರುವ ಹಿನ್ನೆಲೆಯಲ್ಲಿ ಸಂತ್ರಸ್ಥ ವಸಂತ ಶೇರಿಗಾರ್ ಅವರಿಗೆ ನ್ಯಾಯ ದೊರಕಿಸಿಕೊಡುವಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಲಾಗಿದೆ ಎಂದು ಡಾ.ಶ್ಯಾನುಭಾಗ್ ತಿಳಿಸಿದ್ದಾರೆ.
ದಾಖಲೆ ಪಡೆಯಲು ವಿವಿಧ ಹಂತದ ಅಧಿಕಾರಿಗಳೊಂದಿಗೆ ಮಾಡಿರುವ ಪತ್ರ ವ್ಯವಹಾರಗಳನ್ನು ದೂರು ಅರ್ಜಿಯೊಂದಿಗೆ ಲಗ್ಗತ್ತಿಸಿರುವ ವಸಂತ ಅವರು, ಈ ಪ್ರಕರಣದಲ್ಲಿ ತನಗಾಗಿರುವ ನಷ್ಟವನ್ನು ಈ ಅಧಿಕಾರಿಯಿಂದ ಭರಿಸಿಕೊಡಬೇಕೆಂದು ನ್ಯಾಯಾಧೀಶರನ್ನು ವಿನಂತಿಸಿದ್ದಾರೆ ಎಂದು ಡಾ.ಶ್ಯಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







