ಉಡುಪಿ| ಸೈಬರ್ ಕ್ರೈಮ್, ಇ.ಡಿ, ಸಿ.ಬಿ.ಐ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ 22 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ತಮ್ಮ ಬ್ಯಾಂಕ್ ಖಾತೆ ಯಿಂದ ಮನಿ ಲಾಂಡರಿಂಗ್ ಆಗುತ್ತಿದೆಯೆಂದು ಬೆದರಿಸಿ 22 ಲಕ್ಷ ಹಣವನ್ನು ಮೋಸದಿಂದ ಪಡೆದು ವಂಚಿಸಿದ ಘಟನೆ ವರದಿಯಾಗಿದೆ.
ಘಟನೆ ವಿವರ: ಜಯಕರ ಕಾಮತ್ ಪಿ (76) ಎನ್ನುವರು ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು ಇವರಿಗೆ ಜು.10ರಂದು ಮಧ್ಯಾಹ್ನ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ವೀಡಿಯೋ ಕಾಲ್ ಬಂದಿದ್ದು, ಕಾಲ್ ಸ್ವೀಕರಿಸಿದಾಗ ಎದುರಿಗೆ ಮಾತನಾಡುತ್ತಿದ್ದ ವ್ಯಕ್ತಿ ಪೊಲೀಸ್ ಯುನಿಫಾರ್ಮ್‌ನಲ್ಲಿದ್ದು ತಾನು ಸೈಬರ್ ಕ್ರೈಮ್ ಕೊಲಬಾ ಮುಂಬಯಿನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ಜಯಕರ್ ಅವರನ್ನು ಉದ್ದೇಶಿಸಿ 'ನೀವು ಮುಂಬಯಿ ಕೆನರಾ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿದ್ದು, ಸ್ಟೇಟ್‌ಮೆಂಟ್ ಹಾಗೂ ಎಟಿಎಮ್ ಕಾರ್ಡ್ ತೋರಿಸಿ ಈ ಅ ಕೌಂಟ್‌ನಿಂದ ನೂರಾರು ಕೋಟಿ ಮನಿ ಲಾಂಡರಿಂಗ್ ಆಗಿರುವುದಾಗಿ ತಿಳಿಸಿದ್ದಲ್ಲದೆ ಜು.11 ರಿಂದ ಜು. 16 ರವರೆಗೆ ಮೊಬೈಲ್ ನಂಬರ್‌ವೊಂದರಿಂದ ಪದೇ ಪದೇ ವಾಟ್ಸಪ್ ಕರೆಗಳನ್ನು ಮಾಡಿ ವಿಶ್ವಾಸ್ ಎಡಿಜಿಪಿ, ಅನಿಲ್ ಕುಮಾರ್, ಇ.ಡಿ ಅಧಿಕಾರಿ, ಸೈಬರ್ ಅಧಿಕಾರಿಗಳು ಎಂದು ನಂಬಿಸಿ, ಫಂಡ್ ವೇರಿಪಿಕೇಷನ್ ಬಗ್ಗೆ ನಿಮ್ಮ ಬ್ಯಾಂಕ್ ಖಾತೆಗಲ್ಲಿರುವ ಹಣವನ್ನು RTGS ಮೂಲಕ ಕಳುಹಿಸುವಂತೆ ಹೇಳಿ, ಒಟ್ಟು 22,00,000 ರೂ. ಹಣವನ್ನು ಆರೋಪಿಗಳು ಹೇಳಿದ ಖಾತೆಗೆ ವರ್ಗಾವಣೆಮಾಡಿರುತ್ತಾರೆ. ಆರೋಪಿತರು ಸೈಬರ್ ಕ್ರೈಮ್, ಇ.ಡಿ, ಸಿ.ಬಿ.ಐ ಅಧಿಕಾರಿಗಳು ಎಂದು ಪಿರ್ಯಾದಿದಾರರನ್ನು ನಂಬಿಸಿ, ಬೆದರಿಸಿ, ಬ್ಯಾಂಕ್ ಖಾತೆಗಳ ವಿವರವನ್ನು ಪಡೆದು, ಮೋಸದಿಂದ 22 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




