ಉಡುಪಿ: ಡಿಡಿಆರ್‌ಸಿಯಿಂದ ವಿಕಲಚೇತನರ ಸಪ್ತಾಹ

ಉಡುಪಿ: ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ರೆಡ್‌ಕ್ರಾಸ್ ಘಟಕದಿಂದ ಪ್ರಾಯೋಜಿತ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಿಂದ ಡಿ.1ರವರೆಗೆ ಒಂದು ವಾರ ಕಾಲ ಎಲ್ಲಾ ವಿವಿಧ ತಾಲೂಕುಗಳಲ್ಲಿ ವಿಕಲಚೇತನರ ಸಪ್ತಾಹವನ್ನು ಆಯೋಜಿಸಲಾಗಿತ್ತು.
ಸಪ್ತಾಹವನ್ನು ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರೆಡ್‌ಕ್ರಾಸ್‌ನ ಜಿಲ್ಲಾ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಉದ್ಘಾಟಿಸಿ ದ್ದರು. ಸಮಾರೋಪ ಸಮಾರಂಭವು ಸೋಮವಾರ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಬಿಂದು ಸಮಾರೋಪ ಭಾಷಣ ಮಾಡಿದರು.
ಸಪ್ತಾಹದ ಅಂಗವಾಗಿ ಕುಂದಾಪುರ ತಾಲೂಕು ಪಂಚಾಯತ್, ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು, ಕಾರ್ಕಳ ತಾಲೂಕು ಪಂಚಾಯತ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ತಾಲೂಕು ಪಂಚಾಯತ್ ಬೈಂದೂರು ಇಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ 21 ಬಗೆಯ ವಿಕಲತೆ, ಕಲಚೇತನರಿಗೆ ದೊರೆಯುವ ಸರಕಾರಿ ಸೌಲಭ್ಯಗಳು, ವಿಕಲಚೇತನರ ಆರೈಕೆ ಮತ್ತು ಕಾನೂನುಗಳ ಕುರಿತಂತೆ ವಿಸ್ತೃತ ಮಾಹಿತಿಗಳನ್ನು ನೀಡಲಾಯಿತು.
ಡಿಡಿಆರ್‌ಸಿ ನೋಡಲ್ ಅಧಿಕಾರಿ ಜಯಶ್ರೀ, ಮನೋಶಾಸ್ತ್ರಜ್ಞರಾದ ವೈಶಾಖ ವಾರಂಬಳ್ಳಿ, ಫಿಸಿಯೋಥೆರಪಿಸ್ಟ್ ಡಾ. ಶ್ರೇಯಾ, ಪ್ರಾಸ್ಥೆಟಿಕ್ ಮತ್ತು ಆರ್ಥೋಟಿಸ್ಟ್ ಇಂಜಿನಿಯರ್ ಜೆನಿಸ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ವಿಷಯಗಳ ಕುರಿತು ಮಾಹಿತಿಗಳನ್ನು ನೀಡಿದರು.
ರಾಜ್ಯ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನಾ ಸುವರ್ಣ ಉಪಸ್ಥಿತರಿದ್ದರು.







