ಉಡುಪಿ | ಮೀನು ಮಾರಾಟ ಫೆಡರೇಶನ್ ಗೆ ನೀಡಿದ ಜಾಗ ರದ್ಧತಿಗೆ ಆಗ್ರಹ

ಉಡುಪಿ, ನ.18: ಮೀನು ಮಾರಾಟ ಫೆಡರೇಶನ್ ಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಬಂದರು ಇಲಾಖೆಗೆ ಸಂಬಂಧಿಸಿದ ಮಲ್ಪೆಯ 9 ಎಕರೆ ಜಾಗವನ್ನು ಕೂಡಲೇ ವಾಪಾಸ್ಸು ಪಡೆಯಬೇಕು. ಇಲ್ಲದಿದ್ದರೆ ಇದರ ವಿರುದ್ಧ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಮಲ್ಪೆ ಹನುಮಾನ್ ನಗರದ ಶ್ರೀಹನುಮಾನ್ ವಿಠೋಬಾ ಭಜನಾ ಮಂದಿರದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಂದಿರದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂದಿರದ ಪ್ರಮುಖರಾದ ಧನಂಜಯ ಕಾಂಚನ್, ಮಲ್ಪೆ ಸೀವಾಕ್ ಜಟ್ಟಿಯಿಂದ ಬಾಲಕರ ಶ್ರೀರಾಮ ಭಜನಾ ಮಂದಿರದವರೆಗೆ 9 ಎಕರೆ ಜಾಗ ಫೆಡರೇಶನ್ ಗೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿದೆ. ಫೆಡರೇಶನ್ ತನ್ನ ಆಡಳಿತ ಮಂಡಳಿಯ ಗಮನಕ್ಕೆ ತಾರದೆ, ಯಾವುದೇ ಚರ್ಚೆ ಮಾಡದೆ, ಕೇವಲ ಫೆಡರೇಶನ್ ಅಧ್ಯಕ್ಷರಾಗಿರುವ ಶಾಸಕ ಯಶ್ಪಾಲ್ ಸುವರ್ಣ ಅವರ ಸ್ವಹಿತಾಸಕ್ತಿಯಿಂದ ಮೀನುಗಾರಿಕೆ ಚಟುವಟಿಕೆ ಹೆಸರಿನಲ್ಲಿ ಈ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದು, ಮುಂದೆ ಇಲ್ಲಿ ಜಲಕ್ರೀಡೆ, ಹೋಮ್ ಸ್ಟೇಯಂತಹ ವಾಣಿಜ್ಯ ಚಟುವಟಿಕೆ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆಂದು ಆರೋಪಿಸಿದರು.
ಈ ಸಂಬಂಧ ಇಲ್ಲಿನ ಐದು ಭಜನಾ ಮಂದಿರದವರು ಕೂಡ ವಿರೋಧ ಇದ್ದು, ಈ ಬಗ್ಗೆ ಶಾಸಕರ ಮನೆಗೆ ಹೋಗಿ ವಿಚಾರಿಸಿದ್ದೇವೆ. ಆಗ ಅವರು ಮಂದಿರಕ್ಕೆ ಸಮಸ್ಯೆ ಆಗುವುದರಿಂದ ಈ ಯೋಜನೆಯನ್ನು ಕೈಬಿಡಲು ಸಿದ್ಧ ಎಂದು ಹೇಳಿಕೆ ನೀಡಿದ್ದರು. ಇದೀಗ ಅವರು ಹನುಮಾನ್ ವಿಠೋಬಾ ಮಂದಿರದ ಎದುರಿನ ಜಾಗ ಬಿಟ್ಟು ಉಳಿದ ಜಾಗವನ್ನು ಪಡೆದುಕೊಳ್ಳುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ನಮ್ಮ ನಿರ್ಧಾರ ಕೇವಲ ನಮ್ಮ ಮಂದಿರದ ಎದುರಿನ ಜಾಗ ಅಲ್ಲ, ಎಲ್ಲ 9 ಎಕರೆ ಜಾಗದ ಗುತ್ತಿಗೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಶಾಸಕರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ನಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ ಇಲ್ಲಿ ಮೀನುಗಾರಿಕೆ ಚಟುವಟಿಕೆ ಮಾಡುವುದಾದರೆ ಅದನ್ನು ಮೀನುಗಾರಿಕೆ ಇಲಾಖೆ ಮಾಡಲಿ, ಅದು ಬಿಟ್ಟು ಫೆಡರೇಶನ್ ಯಾಕೆ ಮಾಡಬೇಕು ಎಂದು ಅವರು ಪ್ರಶ್ನಿಸಿದರು.
ಮಂದಿರದ ಎದುರು ಇರುವ ರಂಗ ಮಂಟಪದಲ್ಲಿ ನಿರಂತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅಲ್ಲದೆ ಮಂದಿರದ ವತಿಯಿಂದ ಆಟೋಟ ಸ್ಪರ್ಧೆಗಳನ್ನು ಇದೇ ಜಾಗದಲ್ಲಿ ಮಾಡುತ್ತ ಬರುತ್ತಿದ್ದೇವೆ. ಈ ಜಾಗ ನಮ್ಮ ಮುಂದಿನ ಪೀಳಿಗೆಗೆ ಉಳಿಯಬೇಕು. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಇದನ್ನು ನೀಡಬಾರದು ಎಂದು ಅವರು ಒತ್ತಾಯಿಸಿದರು.
ಈ ಮಂದಿರ ನಿರ್ಮಾಣ ಆಗಲು ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್ ತುಂಬಾ ಸಹಕಾರ ನೀಡಿದ್ದಾರೆ. ಇಲ್ಲಿನ 550 ಮನೆಗಳಿಗೆ ಹಕ್ಕುಪತ್ರ ಸಿಗಲು ಅವರು ತುಂಬಾ ಶ್ರಮ ಪಟ್ಟಿದ್ದಾರೆ. ಅದು ಬಿಟ್ಟು ನಮ್ಮ ಈ ಹೋರಾಟದ ಹಿಂದೆ ಅವರು ಇಲ್ಲ. ನಮ್ಮ ಹೋರಾಟಕ್ಕೆ ಯಾರು ಕೂಡ ಸಹಕಾರ ನೀಡಿದರೂ ಅವರನ್ನು ನಾವು ಒಪ್ಪಿಕೊಳ್ಳುತ್ತೇವೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ. ಪಕ್ಷಬೇಧ ಮರೆತು ನಾವು ನಮ್ಮ ಜಾಗಕ್ಕಾಗಿ ಹೋರಾಟ ಮಾಡುತ್ತೇವೆ ಎಂದರು.
ಈ ಹೋರಾಟದಲ್ಲಿ ತೊಡಗಿಸಿಕೊಂಡ ನಮ್ಮ ಸದಸ್ಯರಿಗೆ ಕೆಲವರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ನಾವು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ನಾವು ಯಾವುದೇ ಬೆದರಿಕೆಗೂ ಜಗ್ಗುವುದಿಲ್ಲ. ನಾವು ಈ ಹೋರಾಟದಲ್ಲಿ ಜೀವ ಕೊಡಲು ಕೂಡ ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂದಿರದ ಅಧ್ಯಕ್ಷ ಸತೀಶ್ ಬಂಗೇರ, ಪ್ರಮುಖರಾದ ಸುರೇಶ್ ಸಾಲ್ಯಾನ್, ಶೇಖರ್ ಪುತ್ರನ್, ವಿಜಯ ಸುವರ್ಣ, ಸುಂದರ್ ಸಾಲ್ಯಾನ್, ತುಕರಾಂ ಮೈಂದನ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಕಾಂಚನ್ ಉಪಸ್ಥಿತರಿದ್ದರು.
‘ಮುಂದಿನ ದಿನಗಳಲ್ಲಿ ಇಲ್ಲಿನ ಬೀಚ್ ಚಟುವಟಿಕೆ ವಾಣಿಜ್ಯೀಕರಣವಾಗಿ ಪರಿವರ್ತನೆ ಆಗುತ್ತದೆ. ಇದರಿಂದ ಈ ಜಾಗ ಮುಂದಿನ ಪೀಳಿಗೆಯಿಂದ ಕೈಯಿಂದ ತಪ್ಪಿ ಹೋಗುತ್ತದೆ. ಅಲ್ಲದೆ ಇಲ್ಲಿನ ಸಾಂಪ್ರಾದಾಯಿಕ ಮೀನು ಗಾರಿಕೆಗೂ ಹೊಡೆತ ಬೀಳಲಿದೆ’.
-ಧನಂಜಯ ಕಾಂಚನ್, ಮಂದಿರದ ಪ್ರಮುಖರು







