Udupi | ಕೊರಗರಿಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ; ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ 12ನೇ ದಿನಕ್ಕೆ

ಉಡುಪಿ: ಕೊರಗ ಸಮುದಾಯದಲ್ಲಿರುವ ವಿದ್ಯಾವಂತ ಯುವಕ- ಯವತಿಯರಿಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ-ಕೇರಳ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದು 12ನೇ ದಿನವನ್ನು ಪೂರ್ಣಗೊಳಿಸಿದ್ದು ಶನಿವಾರ 13ನೇ ದಿನವನ್ನು ಪ್ರವೇಶಿಸಲಿದೆ.
ಅಳಿವಿನಂಚಿನಲ್ಲಿರುವ ಮೂಲನಿವಾಸಿಗಳೆಂದು ಗುರುತಿಸಲಾದ ಕೊರಗ ಸಮುದಾಯ ಈಗಲೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತೀರಾ ಹಿಂದುಳಿ ದಿದ್ದು, ಸರಕಾರ ಈಗಾಗಲೇ ಒಪ್ಪಿಕೊಂಡು ಬಜೆಟ್‌ನಲ್ಲೂ ಪ್ರಕಟಿಸಿರುವ ತಮ್ಮ ಬಹುಕಾಲದ ಬೇಡಿಕೆಯಾದ ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಒತ್ತಾಯಿಸಿ ಡಿ.15ರಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ಪ್ರಾರಂಭಿಸಿತ್ತು.
ಧರಣಿಯ ಮೊದಲ ದಿನ ಎಡಿಸಿ ಅವರು ಭೇಟಿಯಾಗಿದ್ದು ಬಿಟ್ಟರೆ ಜಿಲ್ಲಾಡಳಿತ ಯಾವುದೇ ಅಧಿಕಾರಿ ಧರಣಿ ಸ್ಥಳಕ್ಕೆ ಬಂದು ನಮ್ಮ ಅಹವಾಲು ಕೇಳಿಲ್ಲ. ಶಾಸಕ ಯಶ್ಪಾಲ್ ಸುವರ್ಣ, ಹಿರಿಯ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಸ್ಥಳಕ್ಕೆ ಬಂದು ಧರಣಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದ್ದಾರೆ.
ನಮಗಿರುವ ನೋವು ಏನೆಂದರೆ ಕಳೆದ 12 ದಿನಗಳಿಂದ ಇಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕೊರಗ ಸಮುದಾಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತೋರುತ್ತಿರುವ ಅಸಡ್ಡೆ. ಕೆಲವೇ ಸಾವಿರ ಜನಸಂಖ್ಯೆ ಇರುವ ಕೊರಗ ಸಮುದಾಯದ ನೋವಿನ ಕುರಿತು ಇವರು ತೋರುತ್ತಿರುವ ನಿರ್ಲಕ್ಷ. ಸಚಿವರು ಒಂದು ದಿನವೂ ನಮ್ಮ ಧರಣಿಯ ಕುರಿತು ವಿಚಾರಿಸಿಲ್ಲ. ಇನ್ನು ಜಿಲ್ಲಾಧಿಕಾರಿಗಳು ಪ್ರತಿದಿನ ಇಲ್ಲಿಂದಲೇ ಹಾದು ಹೋಗುತ್ತಿದ್ದು ಒಂದು ಕ್ಷಣ ಇಲ್ಲಿ ಬಂದು ನಮ್ಮ ಬೇಡಿಕೆಯನ್ನು ಕೇಳಿಲ್ಲ. ಬದಲಿಗೆ ಧರಣಿ ನಿಲ್ಲಿಸಿ ಮನವಿಯನ್ನು ತಂದು ಕೊಡಲಿ ಎಂದು ಇಲಾಖೆಯ ಅಧಿಕಾರಿಗಳ ಮೂಲಕ ತಿಳಿಸಿದ್ದಾರೆ ಎಂದು ಧರಣಿ ನಿರತರು ನೋವಿನಿಂದ ನುಡಿಯುತ್ತಾರೆ.
‘ಇದೇನು ನಮ್ಮ ಹೊಸ ಬೇಡಿಕೆಯಲ್ಲ. ಕಳೆದ ವರ್ಷ ಇದೇ ಬೇಡಿಕೆಗಳನ್ನು ಮುಂದಿರಿಸಿ ನಾವು ಜು.22ರಿಂದ ಆ.2ರವರೆಗೆ ಇಲ್ಲೇ ದರಣಿ ನಡೆಸಿದ್ದೆವು. ಕೊನೆಗೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಇಲ್ಲಿಗೆ ಬಂದು ಮಾಡಿಕೊಂಡ ಮನವಿ ಹಾಗೂ ಅವರು ನೀಡಿದ ಭರವಸೆಯ ಮೇಲೆ ಧರಣಿ ಹಿಂದೆಗೆದುಕೊಂಡಿದ್ದೆವು ಎಂದು ಸುಶೀಲ ನಾಡ ತಿಳಿಸಿದರು.
ಕಳೆದ ಬಜೆಟ್‌ನಲ್ಲಿ ನೇರ ನೇಮಕಾತಿಯ ಘೋಷಣೆ ಮಾಡಲಾಗಿದೆ. ಆದರೆ ಅದಿನ್ನೂ ಆದೇಶವಾಗಿ ಬಂದಿಲ್ಲ. ಈ ಬಗ್ಗೆ ನಾವು ಮುಖ್ಯಮಂತ್ರಿಗಳು, ಇಲಾಖೆಯ ನಿರ್ದೇಶಕರು, ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ನೀಡಿದ ಭರವಸೆಯನ್ನು ಅನುಷ್ಠಾನ ಗೊಳಿಸುವಂತೆ ಆಗ್ರಹಿಸಿದ್ದೇವೆ. ಆದರೆ ಏನೂ ಪ್ರಗತಿಯಾಗಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.
ಕೊರಗ ಸಮುದಾಯದಲ್ಲಿರುವುದು ಒಂದೆರಡು ಸಾವಿರ ವಿದ್ಯಾವಂತ ಯುವಕ-ಯುವತಿಯರು. ಅವರಿಗೆ ಅರ್ಹತೆಗನುಗುಣವಾಗಿ ಸರಕಾರಿ ಕೆಲಸ ನೀಡುವುದು ಕಷ್ಟದ ಕೆಲಸವೇನಲ್ಲ. ಇವರಲ್ಲಿ ಹೆಚ್ಚಿನವರಿಗೆ ವಯೋಮಿತಿ ಮೀರುತ್ತಿದೆ. ಹೀಗಾಗಿ ಕೂಡಲೇ ಈ ಬಗ್ಗೆ ಆದೇಶ ಹೊರಡಿಸಿ ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಸುಶೀಲ ನಾಡ ಹೇಳಿದರು.
ಅರಣ್ಯ ಬುಡಕಟ್ಟು ಸಮುದಾಯಗಳ ಅರ್ಹ ವಿದ್ಯಾವಂತ ನಿರುದ್ಯೋಗಿ ಗಳನ್ನು ಕರ್ನಾಟಕ ಸರಕಾರದ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡಿ ಉದ್ಯೋಗ ಭದ್ರತೆ ಒದಗಿಸುವ ಆದೇಶ ಹೊರಡಿಸುವವರೆಗೆ ಈ ಹೋರಾಟ ವನ್ನು ಮುಂದುವರಿಸಲಾಗುವುದು ಎಂದು ನಾಡ ಸ್ಪಷ್ಟಧ್ವನಿಯಲ್ಲಿ ಹೇಳಿದರು.
ಇಂದಿನ ಧರಣಿಯಲ್ಲಿ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಅಲ್ಲದೇ ಸಮುದಾಯದ ಮುಖಂಡರಾದ ಸಂಯೋಜಕ ಕೆ.ಪುತ್ರನ್ ಹೆಬ್ರಿ, ಶೇಖರ ಕೆಂಜೂರು, ದೀಪಾ ನೇಜಾರು, ಭಾರತಿ ಎಲ್ಲೂರು, ಪ್ರವೀಣ್ ಹೆಬ್ರಿ, ವಿಮಲ ಕಳ್ತೂರು, ಶಕುಂತಲಾ ನೇಜಾರು, ವಾಸು ಮಣಿಪಾಲ ಹಾಗೂ ಇತರರು ಪಾಲ್ಗೊಂಡಿದ್ದರು.







