ಉಡುಪಿ | ಇಂದ್ರಾಳಿ ಮೇಲ್ಸೇತುವೆ ಬಳಿ ಮೆಟ್ಟಿಲು ಸ್ಥಾಪನೆಗೆ ಆಗ್ರಹ

ಉಡುಪಿ, ಡಿ.27: ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯ ನವೀಕೃತ ಮೇಲ್ಸೇತುವೆ ಬಳಿ, ರಸ್ತೆ ದಾಟಲು ಸಮರ್ಪಕವಾದ, ದಾರಿ ವ್ಯವಸ್ಥೆ ಇಲ್ಲದೆ ಪಾದಚಾರಿಗಳು ಪ್ರಯಾಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ದಿಬ್ಬ ಹತ್ತಬೇಕಾದ ಸ್ಥಿತಿಯು ನಿರ್ಮಾಣವಾಗಿದೆ.
ಸಾರ್ವಜನಿಕರು ರಸ್ತೆ ದಾಟ ಬೇಕಾದ ಸ್ಥಳವು ಬಹಳ ಎತ್ತರ ಪ್ರದೇಶದಲ್ಲಿದ್ದು, ಮೆಟ್ಟಿಲುಗಳಿಲ್ಲದೆ ಸಮಸ್ಯೆ ಉದ್ಭವಿಸಿದೆ. ಚಿಕ್ಕಪುಟ್ಟ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು, ಕಂಕುಳದಲ್ಲಿ ಮಗು ಹೊತ್ತುಕೊಂಡು ಸಾಗುವವರು ರಸ್ತೆ ದಾಟುವುದೇ ಸಾಹಸವಾಗಿದೆ. ದಿನ ನಿತ್ಯ ಸಾವಿರಾರು ಜನರು ಇಂದ್ರಾಳಿಯ ಹಳೆ ಮೇಲ್ಸೇತುವೆ ಹೆದ್ದಾರಿಯಿಂದ ಹೊಸ ಮೆಲ್ಸೇತುವೆ ಕಡೆಗೆ ದಾಟುವುದು ಕಂಡುಬರುತ್ತದೆ.
ನಿತ್ಯವು ಇಲ್ಲಿ ಸಾರ್ವಜನಿಕರು ಆಯಾತಪ್ಪಿ ಬಿದ್ದು ಗಾಯಾಳುಗಳಾಗುವ ಘಟನೆಗಳು ನಡೆಯುತ್ತಿವೆ. ತುರ್ತಾಗಿ ಈ ಸೂಕ್ಷ್ಮ ಸ್ಥಳದಲ್ಲಿ ಮೆಟ್ಟಿಲು ನಿರ್ಮಾಣ ಮಾಡಬೇಕಾಗಿದೆ. ಉಡುಪಿ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಮಸ್ಯೆಯತ್ತ ಗಮನಹರಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.





