ಉಡುಪಿ | ನ.16ರಂದು ಆದರ್ಶ ಆಸ್ಪತ್ರೆಯಲ್ಲಿ ಡಯಾಬಿಟೀಸ್ ಮೇಳ

ಉಡುಪಿ, ನ.14: ನಗರದ ಆದರ್ಶ ಆಸ್ಪತ್ರೆ, ಆದರ್ಶ ಚಾರಿಟೇಬಲ್ ಟ್ರಸ್ಟ್, ಜಿಲ್ಲಾಸ್ಪತ್ರೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾ ಸರ್ವೇಕ್ಷಣಾ ಘಟಕ, ಪ್ರಸಾದ್ ನೇತ್ರಲಯ, ರೆಡ್ಕ್ರಾಸ್ ಉಡುಪಿ ಐಎಂಎ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ನ.16ರ ರವಿವಾರ ನಗರದ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ಆವರಣದಲ್ಲಿ ಡಯಾಬಿಟೀಸ್ ಮೇಳವನ್ನು ಆಯೋಜಿಸಿದೆ ಎಂದು ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಹಿರಿಯ ವೈದ್ಯಕೀಯ ತಜ್ಞ ಡಾ.ಜಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ಶಿಬಿರ ನಡೆಯಲಿದ್ದು, ನುರಿತ ತಜ್ಞ ವೈದ್ಯರು ಮಧುಮೇಹ ಕಾಯಿಲೆ ಬಗ್ಗೆ ವಿಸ್ತೃತ ಮಾಹಿತಿ ಹಾಗೂ ತಪಾಸಣೆಯನ್ನು ನಡೆಸಲಿದ್ದಾರೆ ಎಂದರು.
ವಿಶ್ವದಲ್ಲಿಂದು 60 ಕೋಟಿ ಮಧುಮೇಹಿಗಳಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ 85 ಕೋಟಿಗೇರುವ ನಿರೀಕ್ಷೆ ಇದೆ. ಅದೇ ರೀತಿ ಭಾರತದಲ್ಲಿ ಸದ್ಯ 11 ಕೋಟಿ ಮಧುಮೇಹಿ ಕಾಯಿಲೆಯವರು ಹಾಗೂ 14 ಕೋಟಿ ಪ್ರಿಡಯಾಬಿಟಿಸ್ ಹೊಂದಿರುವ ರೋಗಿಗಳಿದ್ದಾರೆ. ಚೀನಾವನ್ನು ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಡಯಾಬಿಟೀಸ್ ರೋಗಿಗಳಿದ್ದಾರೆ. ಜೀವನಶೈಲಿಯಿಂದ ಬರುವ ಈ ರೋಗದ ಕುರಿತಂತೆ ಜನಜಾಗೃತಿ ಅಗತ್ಯ ಎಂದು ಅವರು ಹೇಳಿದರು.
ಡಯಾಬಿಟೀಸ್ ಶಿಬಿರವನ್ನು ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಲಿದ್ದು, ಡಿಎಚ್ಓ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾಸರ್ಜನ್ ಡಾ.ಎಚ್. ಅಶೋಕ್, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ್, ಎಪಿಐ ಅಧ್ಯಕ್ಷ ಡಾ.ಸುರೇಶ್ ಹೆಗ್ಡೆ, ಐಎಂಎ ಅಧ್ಯಕ್ಷ ಡಾ.ಅಶೋಕಕುಮಾರ್ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಸುಹಾಸ್ ಜಿ.ಸಿ., ಮ್ಯಾನೇಜರ್ ಡಿಯಾಗೋ ಕ್ವಾಡ್ರಸ್, ರೋವಿನ ಡಿಸೋಜ ಉಪಸ್ಥಿತರಿದ್ದರು.







