ಉಡುಪಿ | ವಿಶ್ವ ಮಧುಮೇಹ ದಿನದ ಪ್ರಯುಕ್ತ ಡಯಾಬಿಟಿಸ್ ಮೇಳ

ಉಡುಪಿ, ನ.16: ಉಡುಪಿ ಆದರ್ಶ ಆಸ್ಪತ್ರೆಯ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಸ್ಪತ್ರೆ, ಎನ್ಸಿಡಿ ವಿಭಾಗ ಉಡುಪಿ, ಜಿಲ್ಲಾ ಸರ್ವೇಕ್ಷಣ ಘಟಕ ಎನ್.ಸಿ.ಡಿ. ಉಡುಪಿ ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ, ಆದರ್ಶ ಚಾರಿಟೇಬಲ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ, ಉಡುಪಿ ರೆಡ್ಕ್ರಾಸ್, ಐ.ಎಂ.ಐ ಉಡುಪಿ, ಎಪಿಐ ಉಡುಪಿ ಮಣಿಪಾಲ್ ಚಾಪ್ಟರ್ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ಡಯಾಬಿಟಿಸ್ ಮೇಳವನ್ನು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆದ ಮೇಳವನ್ನು ಆದರ್ಶ ಆಸ್ಪತ್ರೆಯ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಸುಹಾಸ್ ಜಿ.ಸಿ. ನೇತೃತ್ವ ವಹಿಸಿದ್ದರು.
ಉಡುಪಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಉಡುಪಿ ಎಪಿಐ ಅಧ್ಯಕ್ಷ ಡಾ.ಸುರೇಶ್ ಹೆಗ್ಡೆ, ಐಎಂಎ ಅಧ್ಯಕ್ಷ ಡಾ.ಅಶೋಕ್ ಕುಮಾರ್, ರೆಡ್ಕ್ರಾಸ್ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ, ಡಾ.ಅಶೋಕ್ ಕುಮಾರ್ ವೈ.ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 1,300ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿ ವಿವಿಧ ಉಚಿತ ಪರೀಕ್ಷೆಗಳನ್ನು ಮಾಡಿಸಿದರು.







