ನ.23ರಂದು ಉಡುಪಿ ಧರ್ಮಪ್ರಾಂತದ ಪರಮ ಪ್ರಸಾದ ಮೆರವಣಿಗೆ
ಉಡುಪಿ, ನ.22: ಉಡುಪಿ ಕ್ರೈಸ್ತ ಧರ್ಮಪ್ರಾಂತ ಮಟ್ಟದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ನ.23ರಂದು ರವಿವಾರ ಅಪರಾಹ್ನ 3:00 ಗಂಟೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಆವರಣದಲ್ಲಿ ನಡೆಯಲಿದೆ.
ವಾರ್ಷಿಕ ಪರಮ ಪ್ರಸಾದ ಮೆರವಣಿಗೆಯ ದಿವ್ಯ ಬಲಿಪೂಜೆಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅರ್ಪಿಸಲಿದ್ದು, ಬಳಿಕ ಪರಮ ಪ್ರಸಾದವನ್ನು ಅಲಂಕರಿಸಲಾದ ತೆರೆದ ವಾಹನದಲ್ಲಿ ನಗರದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಪರಮ ಪ್ರಸಾದಕ್ಕೆ ಸಾರ್ವಜನಿಕ ಗೌರವ ಸಲ್ಲಿಸಲಾಗುವುದು.
ಧಾರ್ಮಿಕ ಕಾರ್ಯಕ್ರಮದಲ್ಲಿ ಯಾಜಕರು, ಧಾರ್ಮಿಕ ಭಗಿನಿಯರು ಹಾಗೂ ಸಾವಿರಾರು ಭಕ್ತಾದಿಗಳ ಇದರಲ್ಲಿ ಭಾಗವಹಿಸಲಿದ್ದಾರೆ. ನಂತರ ಧರ್ಮಾಧ್ಯಕ್ಷರ ಪ್ರೇರಣಾದಾಯಕ ಪ್ರವಚನ ನಡೆಯಲಿದೆ.
ಬಲಿಪೂಜೆಯ ನಂತರ ದಿವ್ಯ ಪರಮಪ್ರಸಾದ ಮೆರವಣಿಗೆ ಮಿಲಾಗ್ರಿಸ್ ಕಾಥೆಡ್ರಲ್ನಿಂದ ಮೌಂಟ್ ರೋಜರಿ ಚರ್ಚ್ಗೆ ಸಾಗಲಿದೆ. ಅಲ್ಲಿ ದೈವವಾಕ್ಯದ ಪ್ರವಚನ ಹಾಗೂ ದಿವ್ಯ ಪರಮಪ್ರಸಾದದ ಆಶೀರ್ವಚನ ನಡೆಯಲಿದೆ. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ n ಸಹಾಯಕ ಧರ್ಮಗುರು ವಂ. ಪ್ರದೀಪ್ ಕಾರ್ಡೋಜಾ ದೈವವಾಕ್ಯದ ಪ್ರವಚನ ನೆರವೇರಿಸಲಿದ್ದಾರೆ.
ಈ ಮಹೋತ್ಸವದ ಸಂದರ್ಭದಲ್ಲಿ ಭಾರತ ಹಾಗೂ ವಿಶ್ವದಾದ್ಯಂತ ಶಾಂತಿ, ಸಹೋದರತ್ವ ಮತ್ತು ಮಾನವೀಯ ಬೆಳವಣಿಗೆಗಾಗಿ ವಿಶೇಷ ಪ್ರಾರ್ಥನೆ ನೆರವೇರಲಿದೆ ಎಂದು ಧರ್ಮಪ್ರಾಂತದ ಶ್ರೇಷ್ಠಗುರು ಮೊನ್ಸಿಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







