ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ ಬಳಸಿ: ಸಿಇಒ ಸೂಚನೆ
ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ಜಿಲ್ಲೆಯಲ್ಲಿ ಬ್ಯಾಂಕುಗಳು ದೈನಂದಿನ ವ್ಯವಹಾರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಹಾಗೂ ಹೆಚ್ಚೆಚ್ಚು ಗ್ರಾಹಕರ ಸಭೆಗಳನ್ನು ಕರೆದು ಅವರ ಸಲಹೆ-ಸೂಚನೆಗಳನ್ನು ಆಲಿಸಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಜಿಲ್ಲೆಯ ಬ್ಯಾಂಕುಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇಂದು ಕರೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜನಸಾಮಾನ್ಯರು, ಗ್ರಾಹಕರು ತಮ್ಮ ದೈನಂದಿನ ವ್ಯವಹಾರಗಳಿಗೆ ಬ್ಯಾಂಕು ಗಳಿಗೆ ಬಂದಾಗ, ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ, ಅವರಿಗೆ ಯಾವುದೇ ರೀತಿಯ ಗೊಂದಲವಾಗದ ರೀತಿಯಲ್ಲಿ ಪೂರಕ ವಾತಾವರಣ ಕಲ್ಪಿಸಿದಾಗ ಬ್ಯಾಂಕಿನ ವ್ಯವಹಾರಗಳು ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದವರು ಹೇಳಿದರು.
ಸಾಲ ಮತ್ತು ಠೇವಣಿ ಅನುಪಾತದಲ್ಲಿ (ಸಿಟಿ ರೇಷ್ಯೂ) ಉಡುಪಿ ರಾಜ್ಯದಲ್ಲೇ ಕೊನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಅಂಶ ಇಂದು ಮತ್ತೊಮ್ಮೆ ಚರ್ಚೆಗೆ ಬಂತು. ಉಡುಪಿ ಠೇವಣಿಯಲ್ಲಿ ಶ್ರೀಮಂತ ಜಿಲ್ಲೆ, ಆದರೆ ಸಾಲ ನೀಡಿಕೆಯಲ್ಲಿ ತೀರಾ ಹಿಂದುಳಿದಿದೆ. ಸಾಲ ನೀಡಿಕೆಯನ್ನು ಉತ್ತೇಜಿಸದೇ ಆರ್‌ಬಿಐ ನಿಗದಿ ಪಡಿಸಿದ ಕನಿಷ್ಠ ಶೇ.60 ಸಿಡಿ ಅನುಪಾತದ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎಂದು ಸಭೆಯಲ್ಲಿ ಮಾತನಾಡಿದ ಸಿಇಓ ಸೇರಿದಂತೆ ನಬಾರ್ಡ್‌ನ ಡಿಜಿಎಂ ಸಂಗೀತಾ ಕರ್ತ, ಆರ್‌ಬಿಐ ಬೆಂಗಳೂರು ಅಧಿಕಾರಿ ಇಳಾ ಸಾಹು ಅಭಿಪ್ರಾಯಪಟ್ಟರು.
ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶನ ದಂತೆ ಸಾಲ-ಠೇವಣಿ ಅನುಪಾತವನ್ನು ಶೇ.60ಕ್ಕೆ ತರಲು ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕೆಲವು ಬ್ಯಾಂಕ್‌ಗಳಲ್ಲಿ ಅನುಪಾತ ತೀರಾ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಸುಧಾರಣೆ ಆಗಬೇಕು ಎಂದು ಪ್ರತೀಕ್ ಬಾಯಲ್ ತಿಳಿಸಿದರು.
ಇದಕ್ಕೆ ಮುನ್ನ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದ ಪ್ರಗತಿಯ ವರದಿ ಮಂಡಿಸಿದ ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಡಿಜಿಎಂ ಶೀಬಾ ಸಹಜಾನ್, ಈ ಅವಧಿಯಲ್ಲಿ ಜಿಲ್ಲೆಯ ಸಿಡಿ ಅನುಪಾತ ಶೇ.48.47 ಆಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (ಶೇ.48.41) ಶೇ.0.06ರಷ್ಟು ಪ್ರಗತಿ ಕಂಡಿದೆ ಎಂದರು.
ಜಿಲ್ಲೆಯ ಉದ್ಯಮಿಗಳಿಗೆ ಜೀವನೋಪಾಯದ ಚಟುವಟಿಕೆಗಳನ್ನು ಕಲ್ಪಿಸಲು ಹಾಗೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಜಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಜಿಲ್ಲೆಯ ಗುರಿಯಾದ 131 ಫಲಾನುಭವಿಗಳನ್ನು ಮೀರಿ ಒಟ್ಟು 538 ಮಂದಿಗೆ 40.15 ಕೋಟಿ ರೂ. ಸಾಲ ಮಂಜೂರಾಗಿದ್ದು, ಇದರಲ್ಲಿ 31.47 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದ ಮಾಹಿತಿ ನೀಡಿದಾಗ, ಈ ಯೋಜನೆಯಡಿ ಸ್ವೀಕೃತ ವಾದ ಎಲ್ಲಾ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದರು.
ಜಿಲ್ಲೆಯ ಒಟ್ಟು ಠೇವಣಿ 4155 ಕೋಟಿ ರೂ.ಗೆ ಏರಿದ್ದು, ಮೂರು ತಿಂಗಳಲ್ಲಿ 3692 ಕೋಟಿ ರೂ.ಹೆಚ್ಚುವ ಮೂಲಕ ಶೇ.9.75ರ ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ ಒಟ್ಟು ಸಾಲ 20,142 ಕೋಟಿಯಾಗಿದ್ದು, ಮೂರು ತಿಂಗಳಲ್ಲಿ 1814 ಕೋಟಿ ರೂ.ಸಾಲ ನೀಡಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.9.90 ಪ್ರಗತಿಯಾಗಿದೆ ಎಂದು ಶೀಬಾ ತಿಳಿಸಿದರು.
ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ಬ್ಯಾಂಕುಗಳಲ್ಲಿ ಆದ್ಯತಾ ವಲಯದಲ್ಲಿ ಒಟ್ಟು ಗುರಿಯ ಶೇ.69.24ರಷ್ಟು ಸಾಧನೆ ತೋರಿಸಿದರೆ, ಆದ್ಯತೇತರ ವಲಯದಲ್ಲಿ ಗುರಿಯನ್ನು ಮೀರಿ ಶೇ.110.70 ಸಾಧನೆ ಮಾಡಲಾಗಿದೆ. ಆದ್ಯತಾ ವಲಯದಲ್ಲಿ 8794 ಕೋಟಿ ಗುರಿಯಲ್ಲಿ 6089 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಕೃಷಿ ವಲಯದಲ್ಲಿ 4439 ನಿಗದಿತ ಗುರಿಯಲ್ಲಿ 3003 ಗುರಿ ಸಾಧಿಸಿ ಶೇ.67.25, ಎಂಎಸ್‌ಎಂಇ ವಲಯಕ್ಕೆ 3425 ಗುರಿಯಲ್ಲಿ 2495 ಗುರಿ ಸಾಧಿಸಿ ಶೇ.72.85ರಷ್ಟು, ಶಿಕ್ಷಣ ವಲಯದ 139 ಗುರಿಯಲ್ಲಿ 113 ಸಾಧಿಸಿ ಶೇ. 81.15ರಷ್ಟು, ವಸತಿ ಕ್ಷೇತ್ರದ 369 ಗುರಿಯಲ್ಲಿ 197 ಸಾಧಿಸಿ ಶೇ. 53.33 ಹಾಗೂ ಇತರೆ ವಲಯಗಳಿಗೆ 422 ನಿಗದಿತ ಗುರಿಯಲ್ಲಿ 281 ಗುರಿ ಸಾಧಿಸಿ ಶೇ.66.66 ಸಾಧನೆ ಮಾಡಲಾಗಿದೆ ಎಂದರು.
ಲೀಡ್ ಬ್ಯಾಂಕಾ ಲ್ಯಾಗ್ ಬ್ಯಾಂಕಾ?: ಆದ್ಯತಾ ವಲಯದಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಗೆ ನಿಗದಿಪಡಿಸಿದ ಗುರಿ 2759.78 ಕೋಟಿಯಲ್ಲಿ 1646.40 ಕೋಟಿ ಯೊಂದಿಗೆ ಶೇ.59.66ರಷ್ಟು ಮಾತ್ರ ಗುರಿ ಮುಟ್ಟಿರುವುದನ್ನು ಎತ್ತಿ ತೋರಿಸಿದ ಪ್ರತೀಕ್ ಬಾಯಲ್, ಲೀಡ್ ಬ್ಯಾಂಕ್ ಆಗಿ ನೀವೇ ಆರ್‌ಬಿಐ ನಿಗದಿ ಪಡಿಸಿದ ಶೇ.75ರ ಗುರಿ ಏಕೆ ಮುಟ್ಟಿಲ್ಲ ಎಂದು ಪ್ರಶ್ನಿಸಿದರಲ್ಲೇ ನೀವು ಲೀಡ್ ಬ್ಯಾಂಕಾ (ಮುಂಚೂಣಿ) ಅಥವಾ ಲ್ಯಾಗ್ ಬ್ಯಾಂಕಾ (ಹಿಂದುಳಿದ) ಎಂಬ ಸಂಶಯ ಬರುತ್ತಿದೆ ಎಂದರು.
ಪಿಎಂಎಫ್‌ಎಂಇ ಯೋಜನೆಯಡಿ ನಿಗದಿತ ಗುರಿಗೆ ಹೆಚ್ಚು ಅರ್ಜಿಗಳು ಸ್ವೀಕೃತವಾಗದೇ ಇರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಿಇಓ, ಈ ಯೋಜನೆ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚು ಅರಿವು ಮೂಡಿಸಿ, ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ತೆಗೆದುಕೊಳ್ಳಬೇಕು. ಸ್ವೀಕೃತವಾದ ಅರ್ಜಿ ಗಳು ತಿರಸ್ಕೃತವಾಗದಂತೆ ನೋಡಿಕೊಳ್ಳಬೇಕು. ಸಾಲ ನೀಡುವಾಗ ಯಾವುದೇ ಕುಂದು ಕೊರತೆ ಎದುರಾದಲ್ಲಿ ಅದನ್ನು ಸರಿಪಡಿಸಿ, ನಿಗದಿತ ಗುರಿ ಸಾಧನೆಗೆ ಮುಂದಾಗಬೇಕು ಎಂದರು. ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಶೀಘ್ರವೇ ಕ್ರಮತೆಗೆದುಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಲೀಡ್‌ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ಆರ್‌ಬಿಐನ ಇಳಾ ಸಾಹು, ನಬಾರ್ಡ್‌ನ ಡಿಜಿಎಂ ಸಂಗೀತಾ ಕರ್ತಾ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಎಜಿಎಂ ರಾಜೇಶ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕ್ ಶಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







