ಜಿಪಂ, ತಾಪಂ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳ ಆಯ್ಕೆ ಮಾಡಿ: ಉಡುಪಿ ಜಿಲ್ಲಾ ಕಾಂಗ್ರೆಸ್‌ಗೆ ಸಚಿವ ಜಾರಕಿಹೊಳಿ ಸಲಹೆ

ಉಡುಪಿ: ಶೀಘ್ರವೇ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬರಲಿದೆ. ಇದರಲ್ಲಿ ಮೀಸಲಾತಿಯನ್ನು ಗಮನಿಸಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕು. ಜೊತೆಗೆ ಚುನಾವಣೆಯಲ್ಲಿ ವಿರೋಧಪಕ್ಷದ ಅಭ್ಯರ್ಥಿಗಳ ಬಲ ಹಾಗೂ ಬಲಹೀನತೆಯನ್ನು ಪರಿಗಣಿಸಿ ಕಾರ್ಯಯೋಜನೆ ರೂಪಿಸುವಂತೆ ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ಜಿಲ್ಲಾ ಕಾಂಗ್ರೆಸ್‌ಗೆ ಕಿವಿಮಾತು ಹೇಳಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲಾ ಭೇಟಿಗೆ ಆಗಮಿಸಿದ ಸಚಿವರು ನಾಯರ್‌ಕೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಸಲಹೆ ನೀಡಿದರು.
ಕಾರ್ಯಕರ್ತರು ಚುನಾವಣೆ ಬಂದಾಗ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳದೆ ನಿರಂತರವಾಗಿ ಪಕ್ಷದಲ್ಲಿ ತೊಡಗಿಸಿಕೊಂಡಾಗ ಮಾತ್ರ ಪಕ್ಷ ಬಲಿಷ್ಠಗೊಳ್ಳಬಲ್ಲದು ಎಂದ ಅವರು ಜಿಲ್ಲೆಯ ಸಮಸ್ಯೆಗಳ ಅರಿವು ನನಗಿದೆ. ಆದಷ್ಟು ಬೇಗ ಅವುಗಳ ಪರಿಹಾರಕ್ಕೆ ಪ್ರಯತ್ನ ಪಡುವುದಾಗಿ ಆಶ್ವಾಸನೆ ನೀಡಿದರು.
ಸರಕಾರದ ಕೆಲವು ಅನುದಾನಗಳು ಸ್ಥಳೀಯ ಶಾಸಕರ ಮಾರ್ಗದರ್ಶನ ದಲ್ಲಿ ನಡೆಯುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಶಾಸಕರ ಕೊರತೆಯಿಂದ ಕಾರ್ಯಕರ್ತರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಜಿಲ್ಲೆಯಿಂದ ಒಬ್ಬ ಎಂಎಲ್‌ಸಿ ಆಯ್ಕೆಯಾದರೆ ನಿಮ್ಮ ಸಮಸ್ಯೆ ಪರಿಹಾರ ಕಾಣಬಹುದು ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವರ ವಿನಯಕುಮಾರ್ ಸೊರಕೆ ಮಾತನಾಡಿ, ಶೀಘ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುವುದರಿಂದ ಮೀಸಲಾತಿಯನ್ನು ಪರಿಶೀಲಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿ ಸಿದರೆ ಪಕ್ಷದ ಹಿಂದಿನ ವೈಭವ ಮರಳುವುದು ನಿಶ್ಚಿತ ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಶೆಟ್ಟಿ ಮಾತನಾಡಿ, ಪಕ್ಷದ ಬೆಳವಣಿಗೆಗೆ ಕೋರ್ ಕಮಿಟಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚುವುದು ಮುಖ್ಯ. ಗ್ಯಾರಂಟಿ ಯೋಜನೆಗಳೆಲ್ಲ ಸಮರ್ಪಕವಾಗಿ ಅನುಷ್ಠಾನವಾಗಿದೆಯೇ ಎಂದು ಪರಿಶೀಲಿಸಲು ಸಮಿತಿಗಳು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಭೆ ನಡೆಸಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಪೂರ್, ಮುಖಂಡರಾದ ಬಿ.ಭುಜಂಗ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಕಿರಣ್‌ಹೆಗ್ಡೆ, ಸುರೇಶ್ ಶೆಟ್ಟಿ ಬನ್ನಂಜೆ, ಮಹಾಬಲ ಕುಂದರ್, ಇಸ್ಮಾಯಿಲ್ ಅತ್ರಾಡಿ, ಡಾ. ಸುನಿತಾ ಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ವೆರೋನಿಕಾ ಕರ್ನೆಲಿಯೋ, ರಾಜು ಪೂಜಾರಿ, ಹರೀಶ್ ಕಿಣಿ, ಮಲ್ಯಾಡಿ ಶಿವರಾಂ ಶೆಟ್ಟಿ, ದಿನೇಶ್ ಪುತ್ರನ್, ನವೀನ್‌ಚಂದ್ರ ಸುವರ್ಣ, ಶುಭೋದ್ ರಾವ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಜ್ಯೋತಿ ಹೆಬ್ಬಾರ್, ಮೀನಾಕ್ಷಿ ಮಾಧವ ಬನ್ನಂಜೆ, ಸರ್ಫುದ್ದೀನ್ ಶೇಖ್, ಎರ್ಮಾಳ್ ಆನಂದ ಪೂಜಾರಿ, ಸಂಧ್ಯಾ ತಿಲಕ್ ರಾಜ್, ಅಬೀಬ್ ಆಲಿ, ದಿವಾಕರ ಕುಂದರ್, ಲಕ್ಷಣ ಪೂಜಾರಿ, ಶೇಖ್ ವಹಿದ್ ಮುಂತಾದವರು ಉಪಸ್ಥಿತರಿದ್ದರು.
ವಕ್ತಾರ ಭಾಸ್ಕರ ರಾವ್ ಕಿದಿಯೂರು ಹಾಗೂ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು.







