ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ‘ನರೇಗ ಬಚಾವ್ ಸಂಗ್ರಾಮ್’ ಆಂದೋಲನ

ಉಡುಪಿ, ಜ.21: ನಮ್ಮ ಯುಪಿಎ ಸರಕಾರ 2005ರಲ್ಲಿ ಜಾರಿಗೆ ತಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಮೂಲ ಸ್ವರೂಪವನ್ನು ಬದಲಾಯಿಸುವ ಹಾಗೂ ಯೋಜನೆಯಿಂದ ಮಹಾತ್ಮಗಾಂಧಿ ಹೆಸರನ್ನು ತೆಗೆಯುವ ಸಂಚನ್ನು ಕೇಂದ್ರ ಸರಕಾರ ರೂಪಿಸುತಿದ್ದು,ದೇಶದ ಬಡ ಕಾರ್ಮಿಕರ ಹೊಟ್ಟೆಗೆ ಹೊಡೆಯುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ನರೇಗಾ ಯೋಜನೆಯ ಮೂಲ ಸ್ವರೂಪ ದೊಂದಿಗೆ ಪುನರ್ ಸ್ಥಾಪಿಸುವುದಕ್ಕೆ ಆಗ್ರಹಿಸಿ ಫೆ.7ರವರೆಗೆ ಜಿಲ್ಲೆಯಾದ್ಯಂತ ನರೇಗಾ ಬಚಾವ್ ಸಂಗ್ರಾಮ್ ಅಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನರೇಗಾ ಯೋಜನೆಯನ್ನು ರದ್ದುಗೊಳಿಸಿ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ. ಉದ್ಯೋಗ ಖಾತ್ರಿಯ ಹಕ್ಕನ್ನು ರಕ್ಷಿಸಲು ಹಾಗೂ ಅದರ ಮೂಲ ಸ್ವರೂಪವನ್ನು ಮರುಸ್ಥಾಪಿಸುವಂತೆ ಆಗ್ರಹಿಸಲು ರಾಷ್ಟ್ರವ್ಯಾಪ್ತಿ ನರೇಗಾ ಬಚಾವ್ ಸಂಗ್ರಾಮ್ ಜನಪರ ಚಳವಳಿಯನ್ನು ಹಮ್ಮಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ತಿಳಿಸಿದರು.
ಮಹಾತ್ಮಗಾಂಧಿ ಹುತಾತ್ಮರಾದ ದಿನವಾದ ಜ.30ರಂದು ವಾರ್ಡ್/ಬೂತ್ ಮಟ್ಟದಲ್ಲಿ ಶಾಂತಿಯುತ ಧರಣಿ ನಡೆಯಲಿದೆ. ಅರ್ಧ ದಿನ ಉಪವಾಸ ಸತ್ಯಾಗ್ರಹ, ಬ್ಲಾಕ್ ಮತ್ತು ವಾರ್ಡ್ ಮಟ್ಟದಲ್ಲಿ ಧರಣಿ ನಡೆಸಲಾಗುವುದು. ಜ.27ರಿಂದ ಫೆ. 6ರವರೆಗೆ ಎಲ್ಲಾ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ತಾಲೂಕು ಮಟ್ಟದಲ್ಲಿ 5ರಿಂದ 10ಕಿ.ಮೀ.ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು.
ಜ.31ರಿಂದ ಫೆ.7ರವರೆಗೆ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನರೇಗಾ ಬಚಾವೋ ಧರಣಿ ಕಾರ್ಯಕ್ರಮ ನಡೆಯ ಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ ವಿಬಿ-ಜಿ ರಾಮ್-ಜಿ ಬಿಲ್ ಹಿಂಪಡೆದು ನರೇಗಾ ಯೋಜನೆಯ ಮೂಲ ಸ್ವರೂಪದೊಂದಿಗೆ ಪುನರ್ ಸ್ಥಾಪಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗುವುದು ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕೇಂದ್ರ ಸರಕಾರ ಬಹುಮತ ಇದೆ ಎನ್ನುವ ಕಾರಣಕ್ಕೆ ಯಾವುದೇ ಚರ್ಚೆಗೆ ಅವಕಾಶ ನೀಡದೇ ವಿಬಿ- ಜಿರಾಮ್ ಜಿ ಬಿಲ್ ತರುವುದಕ್ಕೆ ಮುಂದಾಗಿದೆ. ಈ ಬಿಲ್‌ನಲ್ಲಿರುವ ರಾಮ್ ದಶರಥನ ಪುತ್ರನೂ ಅಲ್ಲ. ಸೀತೆಯ ಪತಿಯೂ ಅಲ್ಲ. ಇದು ನಾಥೂರಾಮ್ ಗೋಡ್ಸೆ ಹೆಸರಿನ ರಾಮ್. ಕೇಂದ್ರ ಸರಕಾರ ಕೇವಲ ರಾಜಕೀಯ ಉದ್ದೇಶಕ್ಕಷ್ಟೇ ಮನರೇಗಾ ಯೋಜನೆಯನ್ನು ರದ್ದುಗೊಳಿಸುತ್ತಿದೆ. ಹಳ್ಳಿಗೆ ಶಕ್ತಿ ಕೊಡುವ ನಮ್ಮ ಯೋಜನೆಯನ್ನು ದೆಹಲಿಗೆ ಶಕ್ತಿ ಕೊಡುವ ಉದ್ದೇಶಕ್ಕೆ ಬಲಿ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸುಮಾರು 6000ದಷ್ಟು ಗ್ರಾಪಂಗಳಿದ್ದು, ಪಂಚಾಯಿತಿ ವ್ಯವಸ್ಥೆಯನ್ನು ಅಸ್ಥಿಪಂಜರ ಮಾಡಲಾಗುತ್ತಿದೆ. ಗಾಂಧೀಜಿ ಹೆಸರನ್ನು ಇತಿಹಾಸದಿಂದ ಅಳಿಸುವ ಹುನ್ನಾರ ಪ್ರಧಾನಿ ಮೋದಿಯದ್ದು. ಈ ಮೂಲಕ ಕಾರ್ಮಿಕರ ಹೊಟ್ಟೆಗೆ ಹೊಡೆಯುವ ಕೆಲಸವಾಗುತ್ತಿದೆ. ಕಾರ್ಮಿಕರನ್ನು ಶ್ರೀಮಂತರ ಕೈಗೆ ನೀಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಅಭಿಯಾನ ಮಾಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಅಣ್ಣಯ್ಯ ಶೇರಿಗಾರ್, ಮಹಾಬಲ ಕುಂದರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರಿಪ್ರಸಾದ್ ರೈ, ಪ್ರಶಾಂತ್ ಜತ್ತನ್ನ, ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.







