ಸರಕಾರಿ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪಿಸಿ: ಬ್ಯಾಂಕ್‌ಗಳಿಗೆ ಸಿಇಒ ಪ್ರತೀಕ್ ಬಾಯಲ್ ಸೂಚನೆ

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರಾಯೋಜಿತ ವಿವಿಧ ಯೋಜನೆಗಳಡಿ ಆಯ್ಕೆಯಾಗಿ ಆರ್ಥಿಕ ನೆರವು ನೀಡಲು ಶಿಫಾರಸ್ಸಾದ ಅರ್ಜಿಗಳನ್ನು ಆದ್ಯತೆಯ ಮೇಲೆ ಜನರಿಗೆ ಅನುಕೂಲವಾಗುವಂತೆ ಸರಳ ರೀತಿಯಲ್ಲಿ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಅಗ್ರಣಿ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ನೇತೃತ್ವದಲ್ಲಿ ಇಂದು ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ಶಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಈವರೆಗೆ 5661 ಅರ್ಜಿಗಳು ಸ್ವೀಕೃತವಾಗಿದ್ದು, 1337 ಅರ್ಜಿಗಳು ತಿರಸ್ಕೃತಗೊಂಡು, 3937 ಫಲಾನುಭವಿ ಗಳಿಗೆ 38.81 ಕೋಟಿ ರೂ. ಮಂಜೂರಾಗಿದೆ. ಇವುಗಳಲ್ಲಿ 3600 ಫಲಾನುಭವಿಗಳಿಗೆ 35.29 ಕೋಟಿ ರೂ. ಸಾಲ ವಿತರಿಸಲಾಗಿದೆ. ತಿರಸ್ಕೃತ ಅರ್ಜಿಗಳ ಸಂಖ್ಯೆ ಕಡಿಮೆಯಾಗಬೇಕು ಎಂದ ಅವರು, ಬಾಕಿ ಇರುವ 337 ಅರ್ಜಿಗಳಿಗೆ ಕೂಡಲೇ ಹಣ ಬಿಡುಗಡೆಗೊಳಿಸುವಂತೆ ಸೂಚಿಸಿದರು.
ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ (ಎಂಇಜಿಪಿ) ಜಿಲ್ಲೆಯ ಉದ್ಯಮಿಗಳಿಗೆ ಜೀವನೋಪಾಯದ ಚಟುವಟಿಕೆಗಳನ್ನು ನಿರ್ಮಿಸಲು ಹಾಗೂ ಜಿಲ್ಲೆಯ ಉದ್ಯಮಗಳನ್ನು ಬೆಂಬಲಿಸಿ ಉದ್ಯೋಗಾ ವಕಾಶ ಸೃಜಿಸಲು 129 ನಿಗದಿತ ಗುರಿಯಲ್ಲಿ 91 ಮಂದಿಗೆ 10.06 ಕೋಟಿ ರೂ. ಆರ್ಥಿಕ ನೆರವು ವಿತರಿಸಲಾಗಿದೆ. ಯಾವುದೇ ಯೋಜನೆಗಳಡಿ ಅರ್ಜಿ ಸಲ್ಲಿಕೆಯಾದಾಗ ಅರ್ಜಿಗಳನ್ನು ಬ್ಯಾಂಕುಗಳಲ್ಲಿ ಬಾಕಿ ಉಳಿಸದೇ ಆದ್ಯತೆಯ ಮೇಲೆ ಅವುಗಳ ವಿಲೇವಾರಿ ಮಾಡಬೇಕು ಎಂದು ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಡಿಜಿಎಂ ಹಾಗೂ ಪ್ರಾದೇಶಿಕ ಮ್ಯಾನೇಜರ್ ಮಹಾಮಾಯ ಪ್ರಸಾದ್ ರಾಯ್, ಕಳೆದೊಂದು ಆರ್ಥಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ಯಾಂಕುಗಳ ಒಟ್ಟಾರೆ ವ್ಯವಹಾರದಲ್ಲಿ ಶೇ.9.59ರಷ್ಟು ಪ್ರಗತಿ ಕಂಡುಬಂದಿದೆ. ಬ್ಯಾಂಕ್‌ಗಳ ಒಟ್ಟು ವ್ಯವಹಾರ ಈಗ 66,323 ಕೋಟಿ ರೂ.ಗಳಿಗೆ ವೃದ್ಧಿಯಾಗಿದ್ದು, ವರ್ಷದಲ್ಲಿ 5805 ಕೋಟಿ ರೂ.ಏರಿಕೆ ಕಂಡಿದೆ ಎಂದರು.
ಈ ಅವಧಿಯಲ್ಲಿ ಬ್ಯಾಂಕುಗಳ ಠೇವಣಿ ಸಂಗ್ರಹದಲ್ಲೂ ಶೇ.8.85ರಷ್ಟು (3,625 ಕೋಟಿ ರೂ.) ಹೆಚ್ಚಳವಾಗಿದ್ದು, ಅದೀಗ 44,610 ಕೋಟಿ ರೂ.ಗೆ ತಲುಪಿದೆ. ಅದೇ ರೀತಿ ಸಾಲ ನೀಡಿಕೆಯಲ್ಲೂ ಬ್ಯಾಂಕುಗಳು ಕಳೆದೊಂದು ವರ್ಷದಲ್ಲಿ ಶೇ.11.16ರಷ್ಟು (2,179 ಕೋಟಿ ರೂ.) ಪ್ರಗತಿ ತೋರಿಸಿದೆ. ಜಿಲ್ಲೆಯ 437 ಬ್ಯಾಂಕ್ ಶಾಖೆಗಳು ನೀಡಿರುವ ಒಟ್ಟು ಸಾಲದ ಮೊತ್ತ ಈಗ 21,713 ಕೋಟಿ ರೂ.ತಲುಪಿದೆ ಎಂದು ವಿವರಿಸಿದರು.
ಸಾಲ-ಠೇವಣಿ ಅನುಪಾತ (ಸಿ.ಡಿ.ಅನುಪಾತ)ದಲ್ಲಿ ಉಡುಪಿ ಜಿಲ್ಲೆಯ ಕಳಪೆ ಸಾಧನೆ ಮುಂದುವರಿದಿದೆ ಎಂದು ಪ್ರಸಾದ್ ರಾಯ್ ಹೇಳಿದರು. ಉಡುಪಿಯ ಸಿಡಿ ಅನುಪಾತ ಕಳೆದ ವರ್ಷಕ್ಕೆ ಹೋಲಿಸಿದರೆ ಅಲ್ಪ ಪ್ರಗತಿ ತೋರಿಸಿದೆ. ಕಳೆದ ವರ್ಷ ಶೇ.47.66 ಇದ್ದರೆ, ಈ ಬಾರಿ ಶೇ.48.62ಕ್ಕೇರಿದೆ. ಶೇ.0.96ರಷ್ಟು ಏರಿಕೆಯಾದರೂ ರಾಜ್ಯದಲ್ಲಿ ಜಿಲ್ಲೆ ಇನ್ನೂ ಕೊನೆಯ ಸ್ಥಾನದಲ್ಲೇ ಇದೆ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆ ಆದ್ಯತಾ ಮತ್ತು ಆದ್ಯತೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.16 ಕೋಟಿ ರೂ.ಗಳ ವಾರ್ಷಿಕ ಗುರಿ ಇದ್ದು, ಕಳೆದೆರಡು ತ್ರೈಮಾಸಿಕದಲ್ಲಿ ಒಟ್ಟಾರೆಯಾಗಿ 8,941.11 ಕೋಟಿ ರೂ.ಗಳ ಗುರಿ ಸಾಧಿಸಿ, ಶೇ. 57.63 ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 4230 ನಿಗದಿತಯಲ್ಲಿ 2274.23 ಕೋಟಿ ವಿತರಿಸಿ ಶೇ. 53.76 ಸಾಧನೆ ಮಾಡಲಾಗಿದೆ. ಎಂಎಸ್‌ಎಂಇ ವಲಯಕ್ಕೆ ನಿಗದಿತ 3713 ಕೋಟಿಯಲ್ಲಿ 2426 ಕೋಟಿ ರೂ.ವಿತರಿಸಿ ಶೇ.65.35 ರಷ್ಟು, ಶಿಕ್ಷಣ ಕ್ಷೇತ್ರಕ್ಕೆ ನಿಗದಿತ 187 ಕೋಟಿ ರೂ.ನಲ್ಲಿ 116 ಕೋಟಿ ವಿತರಿಸಿ ಶೇ. 62.12 ಸಾಧನೆ ಮಾಡಲಾಗಿದೆ ಎಂದರು.
ಗೃಹ ಸಾಲದಲ್ಲಿ 510.02 ಕೋಟಿ ರೂ.ಗುರಿ ಇದ್ದು, ಈವರೆಗೆ 111.45 ಕೋಟಿ ರೂ.ವಿತರಿಸಿ ಶೇ. 21.85, ಇತರೆ ಕ್ಷೇತ್ರಗಳಿಗೆ 399 ನಿಗದಿತ ಗುರಿಯಲ್ಲಿ 194 ಗುರಿ ಸಾಧಿಸಿ ಶೇ.48.46 ರಷ್ಟು ಸಾಧನೆ ಮಾಡಲಾಗಿದೆ ಎಂದರು. ನಿರ್ಮಾಣ ಕಾಮಗಾರಿ ಮಳೆಗಾಲ ಕಳೆದು ಈಗಷ್ಟೇ ಪುನರಾರಂಭ ಗೊಂಡಿರುವುದರಿಂದ ಗೃಹ ಸಾಲದಲ್ಲಿ ಬ್ಯಾಂಕ್‌ಗಳ ಸಾಧನೆ ಇನ್ನು ಉತ್ತಮಗೊಳ್ಳಬಹುದು ಎಂದು ಅವರು ಹೇಳಿದರು.
ರಿಸರ್ವ್ ಬ್ಯಾಂಕಿನ ಬೆಂಗಳೂರು ವಲಯದ ಎಜಿಎಂ ನಿಶಾ ಠಾಕೂರ್ ಮಾತನಾಡಿ, ಆರ್‌ಬಿಐ ನಿಯಮಾನುಸಾರ ಜಿಲ್ಲೆಗಳ ಸಿ.ಡಿ ಅನುಪಾತವು ಶೇ. 60ಕ್ಕಿಂತ ಕಡಿಮೆ ಇರಬಾರದು. ಇದನ್ನು ಹೆಚ್ಚಿಸಲು ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ನಬಾರ್ಡ್‌ನ ಡಿಡಿಎಂ ಸಂಗೀತಾ ಕರ್ತಾ, ಎಸ್‌ಸಿಡಿಸಿಸಿಯ ಡಿಜಿಎಂ ಸದಾಶಿವ ಶೇರಿಗಾರ್, ರುಡ್‌ಸೆಟ್ ಬ್ರಹ್ಮಾವರದ ನಿರ್ದೇಶಕ ಡಾ.ಬೊಮ್ಮಯ್ಯ ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ. ಸಭೆಯನ್ನು ನಿರ್ವಹಿಸಿದರು.







