ಮಾಸಿಕ, ಸಮಗ್ರ ಮಳೆಯಲ್ಲಿ ಉಡುಪಿ ಜಿಲ್ಲೆಗೆ ರಾಜ್ಯದಲ್ಲೇ ಅಗ್ರಸ್ಥಾನ

ಉಡುಪಿ, ಆ.1: ರಾಜ್ಯದಲ್ಲಿ ಅತ್ಯಧಿಕ ಮಳೆ ಬೀಳುವ ಜಿಲ್ಲೆಯಾಗಿ ಇದೀಗ ಉಡುಪಿ ಜಿಲ್ಲೆ ಗುರುತಿಸಿ ಕೊಂಡಿದೆ. ಜೂನ್ ತಿಂಗಳಿನಂತೆ, ಜುಲೈ ತಿಂಗಳಲ್ಲೂ ಉಡುಪಿ ಜಿಲ್ಲೆ ಅತ್ಯಧಿಕ ಮಳೆ ಬಿದ್ದ ಜಿಲ್ಲೆಯಾಗಿ ದಾಖಲೆಗೆ ಸೇರುವುದರೊಂದಿಗೆ 2025ರಲ್ಲಿ ಇದುವರೆಗೆ ಅತ್ಯಧಿಕ ಮಳೆ ಬಿದ್ದ ರಾಜ್ಯದ ಅಗ್ರಗಣ್ಯ ಜಿಲ್ಲೆಯಾಗಿಯೂ ಮೂಡಿಬಂದಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಜುಲೈ 1ರಿಂದ 31ರವರೆಗೆ ಒಟ್ಟು 1626ಮಿ.ಮೀ. ಮಳೆ ಬಿದ್ದಿದೆ. ಈ ಅವಧಿಯ ವಾಡಿಕೆ ಮಳೆ 1448 ಮಿ.ಮೀ. ಆಗಿದ್ದು, ಈ ವರ್ಷ ವಾಡಿಕೆ ಮಳೆಗಿಂತ ಶೇ.12ರಷ್ಟು ಅಧಿಕ ಮಳೆ ಸುರಿದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಒಟ್ಟು 2047 ಮಿ.ಮೀ. ಮಳೆಯಾಗುವ ಮೂಲಕ ಶೇ.41ರಷ್ಟು ಅಧಿಕ ಮಳೆ ಸುರಿ ದ್ದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ 421ಮಿ.ಮೀ. ಮಳೆ ಕಡಿಮೆ ಬಿದ್ದಿದೆ.
ಅಚ್ಚರಿಯ ವಿಷಯವೆಂದರೆ ಈ ಬಾರಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಶೇ.12ರಷ್ಟು ಅಧಿಕ ಮಳೆಯಾದರೂ, ಜಿಲ್ಲೆಯಲ್ಲೇ ಅತ್ಯಧಿಕ ಮಳೆ ಬೀಳುವ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಗಳಲ್ಲಿ ಮಳೆಗೆ ಕೊರತೆಯಾಗಿರುವುದು. ಇಲ್ಲಿ ವಾಡಿಕೆಯ ಮಳೆಯಲ್ಲಿ ಕ್ರಮವಾಗಿ ಶೇ.1 ಹಾಗೂ ಶೇ.9ರಷ್ಟು ಕೊರತೆ ಕಾಣಿಸಿಕೊಂಡಿದೆ.
ಜುಲೈ ತಿಂಗಳಲ್ಲಿ ಬಿದ್ದ ತಾಲೂಕುವಾರು ಮಳೆಯ ಪ್ರಮಾಣ
ಕಾರ್ಕಳ ತಾಲೂಕಿನ ತಿಂಗಳ ವಾಡಿಕೆ ಮಳೆ 1503 ಮಿ.ಮೀ. ಆಗಿದ್ದರೆ ಈ ಬಾರಿ ಬಿದ್ದಿರುವುದು 1448 ಮಿ.ಮೀ. ಮಳೆ. ಹೀಗಾಗಿ ಅಲ್ಲಿ ಶೇ.1ರಷ್ಟು ಮಳೆಗೆ ಕೊರತೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ ವಾಡಿಕೆ ಮಳೆ 1179 ಮಿ.ಮೀ. ಆಗಿದ್ದು, ಈ ಸಲ 1699ಮಿ.ಮೀ.ಮಳೆಯಾಗಿದೆ. ಇದರಿಂದ ಶೇ.44ರಷ್ಟು ಅಧಿಕ ಮಳೆಯಾಗಿದೆ.
ಉಡುಪಿ ತಾಲೂಕಿನ ವಾಡಿಕೆ ಮಳೆ 1214ಮಿ.ಮೀ. ಆಗಿದ್ದು, ಈ ಬಾರಿ 1424ಮಿ.ಮೀ.ಮಳೆ ಬಿದ್ದಿದೆ. ಇದರಿಂದ ಶೇ.17 ಅಧಿಕ ಮಳೆಯಾಗಿದೆ. ಬೈಂದೂರು ತಾಲೂಕಿನಲ್ಲಿ 1389ಮಿ.ಮೀ. ಜುಲೈ ತಿಂಗಳ ವಾಡಿಕೆ ಮಳೆಯಾಗಿದ್ದು, 2025ನೇ ಸಾಲಿನಲ್ಲಿ 1739ಮಿ.ಮೀ. ಮಳೆಯಾಗುವ ಮೂಲಕ ಶೇ.25ರಷ್ಟು ಅಧಿಕ ಮಳೆಯಾಗಿದೆ.
ಬ್ರಹ್ಮಾವರ ತಾಲೂಕಿನ ವಾಡಿಕೆ ಮಳೆ 1271ಮಿ.ಮೀ ಆದರೆ ಈ ಬಾರಿ ಬಿದ್ದಿರುವುದು 1503ಮಿ.ಮೀ. ಹೀಗಾಗಿ ಶೇ.18 ಅಧಿಕ ಮಳೆ ದಾಖಲಾಗಿದೆ. ಕಾಪುವಿನ ವಾಡಿಕೆ ಮಳೆ 1153ಮಿ.ಮೀ. ಆಗಿದ್ದು, 1366 ಮಿ.ಮೀ. ಮಳೆಯಾಗುವ ಮೂಲಕ ಶೇ.18ರಷ್ಟು ಅಧಿಕ ಮಳೆ. ಹೆಬ್ರಿ ತಾಲೂಕಿನಲ್ಲಿ ವಾಡಿಕೆ ಮಳೆ 1927 ಮಿ.ಮೀ. ಆಗಿದ್ದರೆ ಈ ಬಾರಿ ಬಿದ್ದಿರುವುದು 1748ಮಿ.ಮೀ.ಮಾತ್ರ. ಹೀಗಾಗಿ ಶೇ.9ರಷ್ಟು ಕೊರತೆ ಕಂಡುಬಂದಿದೆ.
ಜನವರಿಯಿಂದ ಜುಲೈವರೆಗೆ ಶೇ.35 ಅಧಿಕ ಮಳೆ: ಈ ವರ್ಷದ ಪ್ರಾರಂಭದಿಂದ ಈವರೆಗೆ ಜಿಲ್ಲೆಯಲ್ಲಿ ಬಿದ್ದ ಸಮಗ್ರ ಮಳೆಯ ಮಾಹಿತಿ ಯನ್ನು ಗಣನೆಗೆ ತೆಗೆದುಕೊಂಡರೆ ಒಟ್ಟಾರೆಯಾಗಿ ಶೇ.35ರಷ್ಟು ಅಧಿಕ ಮಳೆಯಾಗಿರುವುದು ಕಂಡುಬರುತ್ತದೆ. ಈ ಪ್ರಮಾಣ ಕಳೆದ ವರ್ಷ ಶೇ.19 ಮಾತ್ರ ಇತ್ತು.
2025ರ ಜನವರಿ ಒಂದರಿಂದ ಜುಲೈ 31ರವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ 2754ಮಿ.ಮೀ. ಆಗಿದೆ. ಈ ವರ್ಷ ಬಿದ್ದಿರುವ ಮಳೆ 3727 ಮಿ.ಮೀ. ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಬಿದ್ದ ಮಳೆಯ ಪ್ರಮಾಣ 3278 ಮಿ.ಮೀ. ಎಂಬುದು ಅಂಕಿಅಂಶಗಳಿಂದ ತಿಳಿದುಬರುತ್ತದೆ.
ಜನವರಿಯಿಂದ ಜುಲೈ ಕೊನೆಯವರೆಗೆ ತಾಲೂಕುವಾರು ಮಳೆಯ ಪ್ರಮಾಣವನ್ನು ನೋಡಿದಾಗ ಕಾರ್ಕಳ ತಾಲೂಕಿನ ವಾಡಿಕೆ ಮಳೆ 2773 ಮಿ.ಮೀ. ಆಗಿದ್ದು, ಈ ಅವಧಿಯಲ್ಲಿ 3793ಮಿ.ಮೀ. ಮಳೆಯಾಗಿದ್ದು, ಶೇ.37ರಷ್ಟು ಅಧಿಕ ಮಳೆ ತಾಲೂಕಿನಲ್ಲಿ ಕಂಡುಬಂದಿದೆ.
ಕುಂದಾಪುರ ತಾಲೂಕಿನ ವಾಡಿಕೆಗೆ ಮಳೆ 2370ಮಿ.ಮೀ. ಆಗಿದ್ದರೆ ಈ ಬಾರಿ 3658ಮಿ.ಮೀ. ಮಳೆ ಬಿದ್ದು ಶೇ.54ರಷ್ಟು ಅಧಿಕ ಮಳೆ ಸುರಿದಿದೆ. ಉಡುಪಿ ತಾಲೂಕಿನ ವಾಡಿಕೆ ಮಳೆ 2460ಮಿ.ಮೀ. ಆಗಿದ್ದು 3422 ಮಳೆ ಬೀಳುವ ಮೂಲಕ ಶೇ.39ರಷ್ಟು ಅಧಿಕ ಮಳೆಯನ್ನು ಕಂಡಿದೆ.
ಬೈಂದೂರು ತಾಲೂಕಿನ ವಾಡಿಕೆ ಮಳೆ 2746ಮಿ.ಮೀ. ಆಗಿದ್ದು ಈ ವರ್ಷ 3850ಮಿ.ಮೀ. ಮಳೆಯಾಗಿ ಶೇ.40ರಷ್ಟು ಅಧಿಕ ಮಳೆಯನ್ನು ತಾಲೂಕು ಕಂಡಿದೆ. ಬ್ರಹ್ಮಾವರದ ವಾಡಿಕೆ ಮಳೆ 2491ಮಿ.ಮೀ ಆಗಿದ್ದರೆ 3502 ಮಿ.ಮೀ. ಬೀಳುವ ಮೂಲಕ ಶೇ.41ರಷ್ಟು ಅಧಿಕ ಮಳೆ ತಾಲೂಕಿ ನಲ್ಲಿ ದಾಖಲಾಗಿದೆ.
ಕಾಪು ತಾಲೂಕಿನ ವಾಡಿಕೆ ಮಳೆ 2391ಮಿ.ಮೀ. ಆದರೆ, ಈ ಸಾಲಿನಲ್ಲಿ 3367ಮಿ.ಮೀ ಮಳೆಯಾಗುವ ಮೂಲಕ ಶೇ.41ರಷ್ಟು ಅಧಿಕ ಮಳೆಯಾಗಿದೆ. ಇನ್ನು ಹೆಬ್ರಿ ತಾಲೂಕಿನ ವಾಡಿಕೆ ಮಳೆ 3445ಮಿ.ಮೀ. ಆಗಿದ್ದು, ಈ ಬಾರಿ 3985 ಮಿ.ಮೀ. ಮಳೆ ಬಿದ್ದಿದೆ. ಇದರಿಂದ ತಾಲೂಕಿನಲ್ಲಿ ಶೇ.16ರಷ್ಟು ಅಧಿಕ ಮಳೆಯಾಗಿರುವುದು ಅಂಕಿಅಂಶಗಳಿಗೆ ಗೊತ್ತಾಗಿದೆ.







