ಉಡುಪಿ ಜಿಲ್ಲೆಯ ಹಲವೆಡೆ ಭಾರೀ ಗಾಳಿಮಳೆ : ಕಾರ್ಕಳದಲ್ಲಿ ರಿಕ್ಷಾ ಮೇಲೆ ಮರ ಬಿದ್ದು ನಾಲ್ವರಿಗೆ ಗಾಯ

ಉಡುಪಿ, ಡಿ.3: ಉಡುಪಿ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ವೇಳೆ ಗುಡುಗು ಸಹಿತ ಭಾರೀ ಗಾಳಿಮಳೆಯಾಗಿದ್ದು, ಕಾರ್ಕಳದಲ್ಲಿ ರಿಕ್ಷಾ ಮೇಲೆ ಮರ ಬಿದ್ದು ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಬೆಳಗ್ಗೆಯಿಂದ ಬಿಸಿಲಿನ ವಾತಾವರಣದ ಇದ್ದ ಉಡುಪಿಯ ನಗರ ಪ್ರದೇಶ, ಮಣಿಪಾಲ, ಕಾಪು, ಪಡುಬಿದ್ರೆ, ಕಾರ್ಕಳ, ಬ್ರಹ್ಮಾವರ ಸಹಿತ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯ ಜೊತೆ ಗುಡುಗು ಮಿಂಚು ಕೂಡ ಕಾಣಿಸಿಕೊಂಡಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ಕೃಷಿಕರು, ವಾಹನ ಸವಾರರು, ಸಾರ್ವಜನಿಕರು ತೀರಾ ತೊಂದರೆ ಅನುಭವಿಸುವಂತಾಗಿದೆ.
ಕಾರ್ಕಳ ತಾಲೂಕಿನ ತೆಳ್ಳಾರು ರಸ್ತೆಯ ರಾಘವೇಂದ್ರ ಮಠದ ಸಮೀಪ ಚಲಿಸುತ್ತಿದ್ದ ರಿಕ್ಷಾದ ಮೇಲೆ ಮರ ಬಿದ್ದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಆಟೋ ಚಾಲಕ ತೆಳ್ಳಾರಿನ ಉದಯ ತನ್ನ ಕುಟುಂಬದ ನಾಲ್ವರನ್ನು ಕಾರ್ಕಳದಿಂದ ತೆಳ್ಳಾರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಅದೃಷ್ಟವಶಾತ್ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಿಂದಾಗಿ ವಿದ್ಯುತ್ ಕಂಬಗಳು ಕೂಡ ಧರೆಗುಳಿದಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿದ್ದು, ಮೆಸ್ಕಾಂ ಸಿಬ್ಬಂದಿ, ಸ್ಥಳೀಯರು ಮರ ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.







