ಉಡುಪಿ | ಶಿಕ್ಷಣ ತಜ್ಞ ಅಶೋಕ್ ಕಾಮತ್‌ಗೆ ವಿಶ್ವಪ್ರಭಾ ಪುರಸ್ಕಾರ ಪ್ರದಾನ

ಉಡುಪಿ, ಜ.26: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಕಾರದೊಂದಿಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಸಂಸ್ಕೃತಿ ಉತ್ಸವದ ಮೂರನೆ ದಿನವಾದ ಸೋಮವಾರ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರವನ್ನು ಶಿಕ್ಷಣ ತಜ್ಞ ಅಶೋಕ್ ಕಾಮತ್ ಅವರಿಗೆ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಹಿಸಿದ್ದರು. ರಾಷ್ಟ್ರೀಯ ತರಬೇತುದಾರ ಶಿಕ್ಷಕ ಕೆ.ರಾಜೇಂದ್ರ ಭಟ್ ಅಭಿನಂದನಾ ಮಾತುಗಳನ್ನಾಡಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ವಿಶ್ವಸ್ಥೆ ಪ್ರಭಾವತಿ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಕಲಾ ಪೋಷಕ ಸಿ.ಎಸ್.ರಾವ್, ಉದ್ಯಮಿಗಳಾದ ಕೃಷ್ಣರಾಜ ತಂತ್ರಿ, ಪ್ರಶಾಂತ್ ಕಾಮತ್ ಉಪಸ್ಥಿತರಿದ್ದರು. ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ಮರವಂತೆ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಷ್ಠಾನದ ವಿಶ್ವಸ್ಥ ವಿಘ್ನೇಶ್ವರ ಅಡಿಗ ಸ್ವಾಗತಿಸಿದರು. ಸಂಚಾಲಕ ರವಿರಾಜ್ ಎಚ್.ಪಿ. ವಂದಿಸಿದರು. ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರಿಂದ ‘ಮಹಾತ್ಮಾರ ಬರವಿಗಾಗಿ’ ನಾಟಕ ಪ್ರದರ್ಶನಗೊಂಡಿತು.







