Udupi | ವಿರೋಧ ಪಕ್ಷಗಳ ಷಡ್ಯಂತ್ರ ವಿರುದ್ಧ ಪರಿಣಾಮಕಾರಿ ಹೋರಾಟ : ಪ್ರೊ.ಎಂ.ನಾಗರಾಜ್

ಉಡುಪಿ : ದೇಶದ ಸಾರ್ವಭೌಮತೆ ಮತ್ತು ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ದೇಶದ ನೀತಿ ನಿರೂಪಣೆ ಆಗುತ್ತಿವೆ ಹೊರತು ವಿದೇಶಿ ನೀತಿಯ ಅನುಕೂಲಕ್ಕಲ್ಲ. ಬಿಜೆಪಿಯ ಅಧಿಕಾರವನ್ನು ಜೀರ್ಣಸಿಕೊಳ್ಳಲಾಗದ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಷಡ್ಯಂತ್ರದ ವಿರುದ್ಧ ಪರಿಣಾಮಕಾರಿ ಯಾದಂತಹ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ನೂತನ ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜ್ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಕಾರ್ಯತಂಡದ ಸಭೆಯಲ್ಲಿ ಪಕ್ಷದ ವತಿಯಿಂದ ಗೌರವ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ರಾಷ್ಟ್ರದ ಸ್ವಾಭಿಮಾನದ ಸಂಕೇತವಾಗಿರುವ ವಂದೇ ಮಾತರಂಗೆ ಅಗೌರವ ತೋರಿದ ಕಾಂಗ್ರೆಸ್ ಮಾನಸಿಕತೆ ಅತ್ಯಂತ ಶೋಚನೀಯ. ಹಣ ಲೂಟಿ, ಅಲ್ಪಸಂಖ್ಯಾತ ತುಷ್ಟೀಕರಣದ ಸರಕಾರ ರಾಜ್ಯದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.
ಅಧ್ಯಕ್ಷತೆಯನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ವಹಿಸಿದ್ದರು. ಎಸ್ಐಆರ್ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುಮಾರ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಟ್ಟಾರ್ ರತ್ನಾಕರ ಹೆಗ್ಡೆ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಮಾಜಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಪ್ರಮುಖರಾದ ಬಿ.ಎನ್.ಶಂಕರ ಪೂಜಾರಿ, ನಯನಾ ಗಣೇಶ್, ದಿನಕರ ಬಾಬು, ಸತ್ಯಾನಂದ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ವಂದಿಸಿದರು.






