ಉಡುಪಿ | ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಗೆ ಉಪಕರಣ ಹಸ್ತಾಂತರ

ಉಡುಪಿ, ಡಿ.10: ಉಡುಪಿಯ ನೇಜಾರಿನ ನೂರುಲ್ ಫುರ್ಕಾನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಯಲ್ಲಿ, ವಿಶೇಷ ಅಗತ್ಯಗಳ ಮಕ್ಕಳ ಶಾರೀರಿಕ ಸಾಮರ್ಥ್ಯ ವೃದ್ಧಿಗೆ ಮಹತ್ತರ ಸಹಾಯವಾಗುವ ಫಿಸಿಯೊಥೆರಪಿ ಉಪಕರಣ ದಾನದ ಹಸ್ತಾಂತರ ಸಮಾರಂಭವು ಇಂದು ಶಾಲಾ ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆಯ ವಲಯ ಮುಖ್ಯಸ್ಥ ರೋಹನ್ ಫ್ರಾಂಕೋ, ಶಾಲೆಯ ಮಕ್ಕಳ ಪುನರ್ವಸತಿ ಕಾರ್ಯಕ್ರಮಕ್ಕೆ ಬಳಸಲಾಗುವ ಅತ್ಯಾಧುನಿಕ ಫಿಸಿಯೊಥೆರಪಿ ಉಪಕರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದರು.
ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ಗುಣಮಟ್ಟದ ಪುನರ್ವಸತಿ ಹಾಗೂ ಆರೈಕೆಯ ಸೌಲಭ್ಯ ನೀಡುವುದು ನಮ್ಮ ಸಾಮಾಜಿಕ ಜವಾಬ್ದಾರಿಯ ಒಂದು ಪ್ರಮುಖ ಅಂಗ. ನೂರುಲ್ ಫುರ್ಕಾನ್ ಸ್ಪೆಷಲ್ ಶಾಲೆಯ ಕೆಲಸ, ಸೇವಾ ಭಾವ ಹಾಗೂ ಸಮರ್ಪಣೆ ಅತ್ಯಂತ ಶ್ಲಾಘನೀಯ ಎಂದು ರೋಹನ್ ಫ್ರಾಂಕೋ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲೆ ದಿಲ್ದಾರ್ ಫಜ್ಲುರ್ ರಹ್ಮಾನ್ ಮಾತನಾಡಿ, ವಿಶೇಷ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮಾತ್ರವಲ್ಲ, ಶಾರೀರಿಕ ಪುನರ್ವಸತಿ ಸಹ ಸಮಾನವಾಗಿ ಅಗತ್ಯ. ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆ ನೀಡಿರುವ ಈ ಅಮೂಲ್ಯ ಬೆಂಬಲದ ಮೂಲಕ ನಮ್ಮ ವಿದ್ಯಾರ್ಥಿಗಳ ಶಾರೀರಿಕ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಮತ್ತಷ್ಟು ಬಲವಾಗಲಿದೆ ಎಂದು ತಿಳಿಸಿದರು.
ಟ್ರಸ್ಟ್ ನ ಉಪಾಧ್ಯಕ್ಷ ಇಕ್ಬಾಲ್ ಮನ್ನ, ಟ್ರಸ್ಟಿ ಅಶ್ರಫ್ ಬಂಗ್ರೆ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಕೌಸರ್ ಬಾನು ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ನಾಸೀರ್ ವಂದಿಸಿದರು.







