UDUPI | ಪ್ರಸಿದ್ಧ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

ಉಡುಪಿ, ನ.26: ನಿವೃತ್ತ ಅಧ್ಯಾಪಕ, ಪ್ರಸಿದ್ಧ ಯಕ್ಷಗಾನ ಪ್ರಸಂಗಕರ್ತ, ಅರ್ಥಧಾರಿ, ಹವ್ಯಾಸಿ ವೇಷಧಾರಿ ಕಂದಾವರ ರಘುರಾಮ ಶೆಟ್ಟಿ (89) ಬುಧವಾರ ಬೆಳಗ್ಗೆ ನಿಧನರಾದರು. ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಕಂದಾವರಲ್ಲಿ ಜನಿಸಿದ ರಘುರಾಮ ಶೆಟ್ಟಿ, ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರುವರೆ ದಶಕಗಳ ಕಾಲ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದರು. ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಬರೆದು ಮಕ್ಕಳಿಂದ ಆಡಿಸುತ್ತಿದ್ದ ಅವರು ನಾಟಕ ನಟರಾಗಿ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ಕೆಲಸ ಮಾಡಿದ್ದರು.
ಯಕ್ಷಗಾನ ವಲಯದಲ್ಲಿ ಕಂದಾವರ ಹೆಸರಿನಿಂದಲೇ ಗುರುತಿಸಲ್ಪಟ್ಟಿದ್ದ ಶೆಟ್ಟರು, ಬಾಲ್ಯದಲ್ಲೇ ಯಕ್ಷಗಾನ ಹಾಡುಗಳನ್ನು ಹಾಡಿ ಬಾಲಭಾಗವತರೆಂದೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಕುಂದಾಪುರದ ಖ್ಯಾತ ನ್ಯಾಯವಾದಿ ಹಾಗೂ ಯಕ್ಷಗಾನ ಮೇಳದ ಯಜಮಾನರಾಗಿದ್ದ ದಿ. ಎಂ.ಎಂ.ಹೆಗ್ಡೆ ಕೂಟದಲ್ಲಿ ಹವ್ಯಾಸಿಯಾಗಿ ಪಾತ್ರನಿರ್ವಹಣೆ ಮಾಡುತ್ತಿದ್ದರು. ಅರ್ಥಧಾರಿಯಾಗಿಯೂ ಖ್ಯಾತನಾಮ ಅರ್ಥಧಾರಿಗಳ ಜತೆ ’ತಾಳಮದ್ದಲೆ’ ಯಲ್ಲೂ ಖ್ಯಾತಿ ಪಡೆದಿದ್ದರು.
1978ರಿಂದ ಪ್ರಸಂಗಕರ್ತರಾಗಿ ಕಂದಾವರ ರಘುರಾಮ ಶೆಟ್ಟಿ ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಚೆಲುವೆ ಚಿತ್ರಾವತಿ, ರತಿ ರೇಖಾ, ಶ್ರೀದೇವಿ ಬನಶಂಕರಿ ಮತ್ತು ಶೂದ್ರ ತಪಸ್ವಿನಿ ಇವರು ಬರೆದ ಕೆಲವು ಪ್ರಸಂಗಗಳಾಗಿದ್ದು, ಜನಪ್ರಿಯತೆಯೊಂದಿಗೆ ತಿರುಗಾಟದಲ್ಲಿ ಸೂಪರ್ಹಿಟ್ ಎನಿಸಿದ್ದವು. ಕಂದಾವರರಿಗೆ ಕಳೆದ ವರ್ಷ ‘ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ್ ಪ್ರಶಸ್ತಿ ಲಭಿಸಿತ್ತು. ಯಕ್ಷಗಾನ ಕಲಾರಂಗ ಇವರಿಗೆ 2013ರಲ್ಲಿ ಮಟ್ಟಿ ಮುರಲೀಧರ ರಾವ್ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸಂತಾಪ :
ಕಂದಾವರ ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.







