Udupi | ಮುಂಗಾರು ಹಂಗಾಮಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆಗೆ ಅವಕಾಶ

ಸಾಂದರ್ಭಿಕ ಚಿತ್ರ
ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ ಅನ್ನು ಅಭಿವೃದ್ದಿ ಪಡಿಸಲಾಗಿದೆ.
ಇಲಾಖೆಯ ಪ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆ 2026-27 ಆ್ಯಪ್ಅನ್ನು ಡೌನ್ಲೋಡ್ ಮಾಡಿಕೊಂಡು, ನಂತರ ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ ಜನರೇಟ್ ಓಟಿಪಿ ಆಯ್ಕೆ ಮಾಡಬೇಕು. ತದನಂತರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಓಟಿಪಿ ಯನ್ನು ದಾಖಲಿಸಿದಲ್ಲಿ ರೈತರ ಎಫ್.ಐ.ಡಿ ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿ ಡೌನ್ಲೋಡ್ ಆಗುತ್ತದೆ.
ಮುಂದಿನ ಹಂತದಲ್ಲಿ ಸರ್ವೆ ನಂಬರ್, ಹಿಸ್ಸಾ, ಮಾಲಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್ ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಬೇಕು. ಒಂದು ವೇಳೆ ರೈತರು ಎಫ್.ಐ.ಡಿ ಸಂಖ್ಯೆಯನ್ನು ಹೊಂದಿಲ್ಲದಿದ್ದಲ್ಲಿ ಹತ್ತಿರದ ಕೃಷಿ ಅಥವಾ ತೋಟಗಾರಿಕಾ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಎಫ್.ಐ.ಡಿ ಸಂಖ್ಯೆಯನ್ನು ಮಾಡಿಸಿ ಕೊಳ್ಳಬಹುದು.
ಬೆಳೆ ಸಮೀಕ್ಷೆ ಮಾಹಿತಿಯನ್ನು ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ/ರೇಶ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುವುದು.
ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ತಾವೇ ದಾಖಲಿಸಲು ಸರಕಾರ ಅವಕಾಶ ಕಲ್ಪಿಸಿದ್ದು, ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಹಾಗೂ ಜಿಲ್ಲೆಯ ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆ್ಯಪ್ ನಲ್ಲಿ ತಮ್ಮ ಜಮೀನಿನ ಸರ್ವೆ ನಂಬರ್ ವಾರು ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ ಮುಂಗಾರು- 2026-27ರ ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.






