ಉಡುಪಿ: 15 ದಿನಗಳಲ್ಲಿ ಸೂಲಡ್ಪು-ಮಡಿವಾಳ ಸಾಲು ಹೊಳೆ ಹೂಳೆತ್ತಲು ಆಗ್ರಹ

ಉಡುಪಿ: ಹೂಳು ತುಂಬಿ ಪರಿಸರದ ಏಳು ಗ್ರಾಮಗಳ ರೈತರಿಗೆ ಪ್ರತಿ ಮಳೆಗಾಲದಲ್ಲಿ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡುವ ಸೂಲಡ್ಪು- ಮಡಿವಾಳಸಾಲು ಹೊಳೆಯ ಹೂಳೆತ್ತುವ ಬಗ್ಗೆ 15 ದಿನಗಳಲ್ಲಿ ಸ್ಪಷ್ಟ ಸೂಕ್ತ ಉತ್ತರ ಸಿಗದೇ ಇದ್ದರೆ ಕಳೆದ ವರ್ಷದಂತೆ ಈ ಬಾರಿಯೂ ಬ್ರಹ್ಮಾವರ ತಾಲೂಕು ಕಚೇರಿಯ ಎದುರು ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಿದ್ದೇವೆ ಎಂದು ಕೋಟದ ರೈತರ ಸಂಘಟನೆ ರೈತಧ್ವನಿಯ ಅಧ್ಯಕ್ಷ ಮಣೂರು ಜಯರಾಮ ಶೆಟ್ಟಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು ಈ ಕುರಿತು ಉಡುಪಿ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದ್ದು,15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. 15 ದಿನಗಳಲ್ಲಿ ಹೂಳೆತ್ತುವ ಪ್ರಕ್ರಿಯೆಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ಸರಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಪ್ರಥಮ ಹಂತದ ಹೋರಾಟವಾಗಿ ಬ್ರಹ್ಮಾವರದ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಈ ಹೋರಾಟವೂ ನಿರೀಕ್ಷಿತ ಫಲ ನೀಡದಿದ್ದರೆ ಉಗ್ರಸ್ವರೂಪದ ಹೋರಾಟಕ್ಕಿಳಿದು ರಸ್ತೆ ತಡೆ, ಸಚಿವರು, ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶನದಂಥ ಹೋರಾಟಕ್ಕೆ ಮುಂದಾಗುವುದಾಗಿ ರೈತ ಸಂಘಟನೆಯ ಪದಾಧಿಕಾರಿಗಳು ಎಚ್ಚರಿಸಿದರು.
ಬ್ರಹ್ಮಾವರ ತಾಲೂಕಿನ ಮಣೂರು, ಕೊಕೂರು,ಗಿಳಿಯಾರು, ಚಿತ್ರಪಾಡಿ, ಕಾರ್ಕಡ ಹಾಗೂ ಕಾವಡಿ ಗ್ರಾಮದಲ್ಲಿ ಸೂಲಡ್ಪು-ಮಡಿವಾಳಸಾಲು ಹೊಳೆ ಹಾದು ಹೋಗುತಿದ್ದು, ಇಲ್ಲೆಲ್ಲಾಹೊಳೆಯಲ್ಲಿ ಹೂಳು ತುಂಬಿದೆ. ಕೊಕೂರು, ಗಿಳಿಯಾರು, ಚಿತ್ರಪಾಡಿ ಹಾಗೂ ಚಿತ್ರಪಾಡಿ ಗ್ರಾಮದ ಬೈಕೂರುಬೈಲಿನಲ್ಲಿ ಅತಿ ಕಿರಿದಾದ ತೂಬು ಸೇತುವೆಗಳಿರುವುದರಿಂದ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗಿ, ಈ ಹೊಳೆ ಪಾತ್ರದ ನೂರಾರು ಎಕರೆ ಪ್ರದೇಶದ ಕೃಷಿ ನಾಶ ವಾಗುತ್ತಿದೆ ಎಂದು ನ್ಯಾಯವಾದಿಗಳೂ ಆದ, ಸಂಘಟನೆಯ ಮಂಜುನಾಥ ಗಿಳಿಯಾರು ವಿವರಿಸಿದರು.
ಅಲ್ಲದೇ ಪರಿಸರದ ತಗ್ಗು ಪ್ರದೇಶಗಳಿಗೆ, ಮನೆಗಳಿಗೆ ನೀರು ನುಗ್ಗಿ, ಗಿಳಿಯಾರು, ಬೇಳೂರು, ಕೋಟ, ಸಾಬ್ರಕಟ್ಟೆಯ ಸಂಪರ್ಕ ರಸ್ತೆಯಲ್ಲಿ ನೀರು ತುಂಬಿ ಸಂಪರ್ಕವೇ ಕಡಿತಗೊಳ್ಳುತ್ತವೆ. ಈ ಬಗ್ಗೆ ಹಲವು ಬಾರಿ ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಅವರು ದೂರಿದರು.
ಈ ಬಗ್ಗೆ ಸರಕಾರವನ್ನು ಎಚ್ಚರಿಸಲು ಧರಣಿಯನ್ನು ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಸಂಘಟನೆಯ ನಿಯೋಗವೊಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಮನವಿಯನ್ನು ನೀಡಿತ್ತು ಎಂದು ಗಿಳಿಯಾರ್ ಹೇಳಿದರು.
ನಮ್ಮ ಮನವಿಗೆ ಸ್ಪಂಧಿಸಿದ ಡಿಸಿಎಂ, 4.5 ಕೋಟಿ ರೂ.ಗಳನ್ನು ವಾರಾಹಿ ನಿಗಮದಿಂದ ಬಿಡುಗಡೆಗೊಳಿಸಿ, ಹೊಳೆಯ ಹೂಳೆತ್ತುವ ಕಾಮಗಾರಿ ನಡೆಸುವಂತೆ ಟಿಪ್ಪಣಿ ಬರೆದಿದ್ದರು. ಇದರಂತೆ ನಿಗಮದ ಅಭಿಯಂತರರು 4.5 ಕೋಟಿ ರೂ.ಗೆ ಅಂದಾಜುಪಟ್ಟಿ ತಯಾರಿಸಿ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್‌ಗೆ ಕಳುಹಿಸಿದ್ದರು. ಇದಾಗಿ ವರ್ಷ ಕಳೆದರೂ ಮುಂದಿನ ಯಾವುದೇ ಪ್ರಕ್ರಿಯೆ ಇದುವರೆಗೆ ನಡೆದಿಲ್ಲ ಎಂದವರು ದೂರಿದರು.
ಹೂಳೆತ್ತುವ ಕಾಮಗಾರಿ ಶೀಘ್ರವೇ ನಡೆಯಲಿದ್ದರೆ ಮುಂದಿನ ಆರು ತಿಂಗಳಲ್ಲಿ ಪ್ರಾರಂಭಗೊಳ್ಳುವ ಮಳೆಗಾಲದಲ್ಲಿ ಮತ್ತೆ ಪರಿಸರದ ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ. ಈಗಾಗಲೇ ಸ್ಥಳೀಯ ಆರು ಗ್ರಾಪಂಗಳು ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಹೂಳೆತ್ತುವ ಕಾಮಗಾರಿ ನಡೆಸಲು ಬಹುಮತ ನಿರ್ಣಯ ಕೈಗೊಂಡಿವೆ ಎಂದು ಮಂಜುನಾಥ ಗಿಳಿಯಾರ್ ಹೇಳಿದರು.
ಆದ್ದರಿಂದ ಇನ್ನು 15 ದಿನಗಳಲ್ಲಿ ಹೊಳೆಯ ಹೂಳೆತ್ತಲು ಟೆಂಡರ್ ಪ್ರಕ್ರಿಯೆ ನಡೆದು ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣದಿದ್ದರೆ ನಾವು ಗ್ರಾಮಸ್ಥರು ಹಾಗೂ ವಿವಿಧ ರೈತ ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ಹಾದಿ ಹಿಡಿಯುತ್ತೇವೆ ಎಂದು ಗಿಳಿಯಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಮೆಂಡನ್, ತಿಮ್ಮ ಕಾಂಚನ್, ಸುಧಾಕರ ಶೆಟ್ಟಿ ಗಿಳಿಯಾರು, ಮಹಾಬಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.







