ಉಡುಪಿ| ಡಾ.ತುಂಬೆ ಮೊಯ್ದಿನ್, ಜಯಪ್ರಕಾಶ್ ಹೆಗ್ಡೆ, ವಿನಯಪ್ರಸಾದ್ ಸೇರಿದಂತೆ ಐದು ಮಂದಿ ಸಾಧಕರಿಗೆ ಮಣಿಪಾಲ ಸಮೂಹದ ‘ಹೊಸ ವರ್ಷದ ಪ್ರಶಸ್ತಿ’

ಜಯಪ್ರಕಾಶ್ ಹೆಗ್ಡೆ, ಲಕ್ಷ್ಮೀನಾರಾಯಣ, ಡಾ.ತುಂಬೆ ಮೊಯ್ದಿನ್, ವಿನಯ ಪ್ರಸಾದ್, ವೆಂಕಟೇಶ್
ಉಡುಪಿ, ಜ.9: ಯುಎಇಯ ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಕೆ. ಜಯಪ್ರಕಾಶ್ ಹೆಗ್ಡೆ, ಖ್ಯಾತ ಬಹುಭಾಷಾ ಚಲನಚಿತ್ರ ನಟಿ ವಿನಯ ಪ್ರಸಾದ್ ಸೇರಿದಂತೆ ಒಟ್ಟು ಐದು ಮಂದಿ ಗಣ್ಯ ಸಾಧಕರನ್ನು 2026ನೇ ಸಾಲಿನ ಹೊಸ ವರ್ಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಕೃತ ಕೆನರಾ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ. ಲಕ್ಷ್ಮೀನಾರಾಯಣ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ನ (ಮಾಹೆ)ನ ಕುಲಪತಿಗಳಾದ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್ ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಇನ್ನಿಬ್ಬರು ಸಾಧಕರಾಗಿದ್ದಾರೆ.
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್, ಮಾಹೆ, ಮಣಿಪಾಲ ಎಜ್ಯುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ), ಮಣಿಪಾಲ ಮೀಡಿಯಾ ನೆಟ್ವರ್ಕ್ ಹಾಗೂ ಡಾ.ಟಿ.ಎಂ.ಎ.ಪೈ ಫೌಂಡೇಷನ್ ಸಂಯುಕ್ತವಾಗಿ ಸಾಧಕರಿಗೆ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಜ.10ರ ಶನಿವಾರ ಸಂಜೆ 5:30ಕ್ಕೆ ಮಣಿಪಾಲದ ಫಾರ್ಚ್ಯೂನ್ ವ್ಯಾಲಿ ವ್ಯೂನಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಐವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಎಂಇಎಂಜಿಯ ಅಧ್ಯಕ್ಷರಾಗಿರುವ ಡಾ.ರಂಜನ್ ಆರ್.ಪೈ, ಟಿ.ಸತೀಶ್ ಯು.ಪೈ, ಡಾ.ಎಚ್. ಎಸ್.ಬಲ್ಲಾಳ್, ವಾಸಂತಿ ಆರ್. ಪೈ ಹಾಗೂ ಟಿ.ಸಚಿನ್ ಪೈ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.







