ಉಡುಪಿ | ಮೋದಿ ಕಾರ್ಯಕ್ರಮಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೈರು!

ಉಡುಪಿ, ನ.28: ಪ್ರಧಾನಿ ನರೇಂದ್ರ ಮೋದಿಯ ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮದ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ಕಾರಣಕ್ಕಾಗಿ ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸದೆ ಗೈರು ಹಾಜರಾಗಿದ್ದಾರೆ.
ಪ್ರಮೋದ್ ಮಧ್ವರಾಜ್ ಶ್ರೀಕೃಷ್ಣ ಮಠದ ಕನಕನ ಕಿಂಡಿಗೆ ಲಕ್ಷಾಂತರ ರೂ. ಮೌಲ್ಯದ ಸ್ವರ್ಣ ಕವಚವನ್ನು ಸೇವಾ ರೂಪದಲ್ಲಿ ನೀಡಿದ್ದು, ಅದನ್ನು ನರೇಂದ್ರ ಮೋದಿ ಆಗಮನದ ವೇಳೆ ಉದ್ಘಾಟಿಸಲು ಕಾರ್ಯಕ್ರಮ ನಿಗದಿ ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ಪ್ರಮೋದ್ ಮಧ್ವರಾಜ್ ಕೂಡ ಪಾಲ್ಗೊಳ್ಳಲಿದ್ದರು.
ಈ ಸಂಬಂಧ ಕಾರ್ಯಕ್ರಮದ ಪಟ್ಟಿಯನ್ನು ಮಠದ ವತಿಯಿಂದ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಪ್ರಧಾನಿ ಕಾರ್ಯಾಲಯದಿಂದ ಬಂದ ಕಾರ್ಯಕ್ರಮದ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಹೆಸರು ಮಾತ್ರ ಇರಲಿಲ್ಲ. ಈ ಕಾರಣಕ್ಕೆ ಪ್ರಮೋದ್ ಮಧ್ವರಾಜ್, ಪ್ರಧಾನಿ ಮೋದಿ ಅವರ ಉಡುಪಿಯ ಇಡೀ ಕಾರ್ಯಕ್ರಮಕ್ಕೆ ಆಗಮಿಸಿದೆ ದೂರ ಉಳಿದಿದ್ದಾರೆ.
ಈ ಬಗ್ಗೆ ಸಂಪರ್ಕಿಸಿದಾಗ ಪ್ರಮೋದ್ ಮಧ್ವರಾಜ್, ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಕಾರ್ಯಾಲಯದಿಂದ ಅನುಮೋದನೆಗೊಂಡು ಬಂದ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಆ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿಲ್ಲ. ಆ ಬಳಿಕ ನನ್ನನ್ನು ಯಾರು ಕೂಡ ಸಂಪರ್ಕಿಸಿಲ್ಲ. ನಾನು ಸೇವಾ ರೂಪದಲ್ಲಿ ಕನಕನ ಕಿಂಡಿಗೆ ಸ್ವರ್ಣ ಕವಚದ ನೀಡಿದ್ದು, ಅದನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದರಿಂದ ನನಗೆ ಸಂತೋಷ ಆಗಿದೆ ಎಂದು ಅವರು ತಿಳಿಸಿದ್ದಾರೆ.







