ಉಡುಪಿ| ಮಹಾರಾಷ್ಟ್ರದ ಫುಲ್‌ಧರ್ ನೇತಂ ‘ಫುಲ್ ಮ್ಯಾರಥಾನ್’ ಚಾಂಪಿಯನ್

ಉಡುಪಿ: ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ಎನ್‌ಇಬಿ ಸ್ಪೋರ್ಟ್ಸ್‌ಗಳ ಸಂಯುಕ್ತ ಆಶ್ರಯದಲ್ಲಿ ಇಂದು ಮುಂಜಾನೆ ಉಡುಪಿಯಲ್ಲಿ ಜರಗಿದ ‘ಉಡುಪಿ ಫುಲ್ ಮ್ಯಾರಥಾನ್-2026’ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಫುಲ್‌ಧರ್ ನೇತಂ ಅವರು 42ಕಿ.ಮೀ. ಓಟವನ್ನು 2ಗಂಟೆ 53.41ನಿ.ಗಳಲ್ಲಿ ಮೊದಲಿಗರಾಗಿ ಕ್ರಮಿಸಿ ಚಾಂಪಿಯನ್ ಪ್ರಶಸ್ತಿಯೊಂದಿಗೆ 20,000ರೂ. ನಗದನ್ನು ಗೆದ್ದುಕೊಂಡರು.
ಬೆಳಗ್ಗೆ 4 ಗಂಟೆಗೆ ಪ್ರಾರಂಭಗೊಂಡ ಈ ಸ್ಪರ್ಧೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡು ಉಡುಪಿ, ಮಣಿಪಾಲ, ಜಿಲ್ಲಾಧಿಕಾರಿ ಕಚೇರಿ ಸಮೀಪದ ಆರ್‌ಟಿಓ ಕಚೇರಿಯವರೆಗೆ ಸಾಗಿ ಮರಳಿ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.
ಮಹಾರಾಷ್ಟ್ರದವರೇ ಆದ ಛೀತ್ರಂ ಕುಮಾರ್ 2ಗಂಟೆ 57ನಿಮಿಷಗಳಲ್ಲಿ ಗುರಿಮುಟ್ಟಿ ರನ್ನರ್‌ಅಪ್ ಸ್ಥಾನ ಪಡೆದರೆ, ಜಯಂತ್ ಬೋರೊ ಅವರು ತೃತೀಯ (3ಗಂ. 02ನಿ) ಸ್ಥಾನಿಯಾದರು.
21ಕಿ.ಮೀ. ದೂರದ ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಸಚಿನ್ ಪೂಜಾರಿ (1ಗಂ. 17.29ನಿ.) ಚಾಂಪಿಯನ್ ಆಗಿ ಮೂಡಿಬಂದರೆ, ಲಕ್ಷ್ಮೀಶ ಸಿ.ಎಸ್. ದ್ವಿತೀಯ ಹಾಗೂ ಪ್ರಶಾಂತ್ ತೃತೀಯ ಸ್ಥಾನ ಗೆದ್ದುಕೊಂಡರು.
ಹಾಫ್ ಮ್ಯಾರಥಾನ್‌ನ ಮಹಿಳೆಯರ ವಿಭಾಗದಲ್ಲಿ ರಿತಿಕಾ ಸಿಂಗ್ (1ಗಂ. 58.32ನಿ) ಅಗ್ರಸ್ಥಾನಿಯಾದರೆ, ಅಶ್ವಿನಿ ರನ್ನರ್ ಅಪ್ ಹಾಗೂ ಮರಿಯಾ ಹಾಜಿ ತೃತೀಯ ಸ್ಥಾನದೊಂದಿಗೆ ನಗದು ಬಹುಮಾನ ಗೆದ್ದುಕೊಂಡರು.
ಉಳಿದಂತೆ 10ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಮಿಥೇಶ್ ಸಿ.ಜಿ. ಮೊದಲಿಗರಾಗಿ ಗುರಿಮುಟ್ಟಿದರೆ, ಸಂತೋಷ್ ಕುಮಾರ್ ಹಾಗೂ ಮುಗೇಶ್ ಎಂ.ಯು. ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದರು.
10ಕಿ.ಮೀ. ಓಟದ ಮಹಿಳೆಯರ ವಿಭಾಗದಲ್ಲಿ ಪ್ರೀತಿ ಮೊಗವೀರ ಅಗ್ರಸ್ಥಾನ ಪಡೆದರು. ಅವರ ನಂತರದ ಸ್ಥಾನ ಗಳನ್ನು ಕ್ರಮವಾಗಿ ಸಾನ್ವಿ ಸಂಭಾಜಿ ಹಾಗೂ ಸ್ವಾತಿ ಪಿ.ಎಂ. ಪಡೆದುಕೊಂಡರು.
ಉಳಿದ ಫಲಿತಾಂಶಗಳ ವಿವರ ಹೀಗಿದೆ...
17ವರ್ಷದೊಳಗಿನ ಬಾಲಕರ ವಿಭಾಗ (5ಕಿ.ಮೀ.): 1.ವಿಠ್ಠಲ ಬಾಳಪ್ಪ, ಸರಕಾರಿ ಪ್ರೌಢ ಶಾಲೆ ವಡೇರಹೋಬಳಿ ಕುಂದಾಪುರ, 2.ಆಕಾಶ್, ಸರಕಾರಿ ಪ್ರೌಢ ಶಾಲೆ ಅಜ್ಜರಕಾಡು, 3. ವರ್ಷಿತ್, ನಿಟ್ಟೆ.
17ವರ್ಷದೊಳಗಿನ ಬಾಲಕಿಯರು: 1.ದೀಕ್ಷಿತಾ, ನಿಟ್ಟೆ. 2.ದೀಪಿಕಾ ನಿಟ್ಟೆ, 3. ಸುೃಜನ್, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ.
14 ವರ್ಷದೊಳಗಿನ ಬಾಲಕರು (3ಕಿ.ಮೀ.): 1.ಸೃಜನ್, ನಿಟ್ಟೆ, 2. ಆಕಾಶ್ ಉಡುಪಿ, 3.ಶೋಧನ್ ಉಡುಪಿ. 14ವರ್ಷದೊಳಗಿನ ಬಾಲಕಿಯರು: 1.ಕುಶಿ ಜೆ.ಶೆಟ್ಟಿ ನಿಟ್ಟೆ, 2.ಶರಣಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ ಕುಂದಾಪುರ, 3. ಪೂಜಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ.
ಮ್ಯಾರಥಾನ್ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಕೆ.ರಘುಪತಿ ಭಟ್, ಅಶೋಕ್ ಕುಮಾರ್ ಕೊಡವೂರು, ಎನ್‌ಇಬಿ ಸ್ಪೋರ್ಟ್ಸ್‌ನ ನಾಗರಾಜ ಅಡಿಗ ಉಪಸ್ಥಿತರಿದ್ದರು.
ವಿಜೇತರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬಹುಮಾನ ವಿತರಿಸಿದರು. ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಡಾ.ರೋಶನ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಒಟ್ಟಾರೆಯಾಗಿ 5,500 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದರು. ಎಲ್ಲಾ ವಿಭಾಗಗಳಲ್ಲಿ ಒಟ್ಟಾರೆಯಾಗಿ 10.00 ಲಕ್ಷ ರೂ. ನಗದನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು.







