ಉಡುಪಿ: ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ; ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

ಉಡುಪಿ, ಫೆ.6: ಜಿಲ್ಲೆಗೆ ಈಗ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಅವರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಲ್ಪೆ ಬೀಚ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಕುರಿತು ನಿರ್ಮಿತಿ ಕೇಂದ್ರವು ಈಗಾಗಲೇ ಯೋಜನಾ ಕಾಮಗಾರಿ ಗಳ ನೀಲನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ತಯಾರಿಸಿ ಮಂಡಿಸಿದೆ. ಮಲ್ಪೆಯಲ್ಲಿ ಹಾಲಿ ಇರುವ ಬೀಚ್ ಹಾಗೂ ಬೀಚ್‌ನ ಉತ್ತರ ಭಾಗದಲ್ಲಿರುವ ಜಾಗವನ್ನು ಸ್ವಾಧೀನ ಪಡಿಸಿಕೊಂಡು ವಲಯವಾರು ಅಭಿವೃದ್ಧಿ ಪಡಿಸಲು ಇದರಲ್ಲಿ ಒತ್ತು ನೀಡಲಾಗಿದೆ. ಅಲ್ಲದೇ ಸೈಂಟ್ ಮೇರೀಸ್ ದ್ವೀಪವನ್ನೂ ಅಭಿವೃದ್ಧಿ ಪಡಿಸಲು ಇದರಲ್ಲಿ ಅವಕಾಶ ಕಲ್ಪಿಸಲಾ ಗಿದೆ. ಮುಂಬರುವ ದಿನಗಳಲ್ಲಿ ಅನುದಾನದ ಲಭ್ಯತೆಯನ್ನು ಆಧರಿಸಿ ಇಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.
ಲೈಫ್ ಜಾಕೆಟ್ ಕಡ್ಡಾಯ: ಪ್ರವಾಸಿಗರು ಬೋಟ್‌ಗಳಲ್ಲಿ ಸಂಚರಿಸುವಾಗ ಲೈಫ್‌ಜಾಕೆಟ್‌ನ್ನು ತಪ್ಪದೆ ಧರಿಸಿ ಪ್ರಯಾಣಿಸಬೇಕು. ತಪ್ಪಿದ್ದಲ್ಲಿ ಅಂತಹವರ ಮೇಲೆ ದಂಡ ವಿಧಿಸುವಂತೆ ಸೂಚಿಸಿದ ಅವರು, ಲೈಫ್ ಜಾಕೆಟ್ ಧರಿಸಿದರೆ ಮಾತ್ರ ಬೋಟ್ ಮಾಲಕರು ಬೋಟ್ ಚಲಾಯಿಸಬೇಕು. ಈ ಬಗ್ಗೆ ಕರಾವಳಿ ಕಾವಲು ಪಡೆ ಆಗಾಗ ಪರಿಶೀಲಿಸುತ್ತಿರಬೇಕು ಎಂದು ಸ್ವರೂಪಾ ತಿಳಿಸಿದರು.
ಜಿಲ್ಲೆಯ ಪ್ರಮುಖ ಕಡಲ ತೀರಗಳಾದ ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪ ಪ್ರದೇಶದಲ್ಲಿ ಪ್ರವಾಸಿಗರ ರಕ್ಷಣೆಯ ಉದ್ದೇಶಕ್ಕಾಗಿ ವಾಚ್ ಟವರ್ ನಿರ್ಮಾಣ, ಹೊರ್ಡಿಂಗ್ ಬೋರ್ಡ್ ಅಳವಡಿಕೆ, ಮಾಹಿತಿ ಫಲಕ, ಸಾರ್ವಜನಿಕ ಸೂಚನಾ ಫಲಕ, ಎಚ್ಚರಿಕೆ ಫಲಕ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.
ಜಲ ಸಾಹಸ: ಉಡುಪಿ ತಾಲೂಕಿನ ಕದಿಕೆ ಗ್ರಾಮದ ಕಡಲ ತೀರದ ನಿರ್ವಹಣೆ, ಸಮಗ್ರ ಅಭಿವೃದ್ಧಿ, ಜಲ ಸಾಹಸ ಚಟುವಟಿಕೆಗಳು ಹಾಗೂ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರಯಾಣಿಕರ ದೋಣಿ ಸೇವೆಗೆ ಟೆಂಡರ್ ಕರೆದು, ಶೇಕಡಾ ವಾರು ಹಂಚಿಕೆ ಆಧಾರದಲ್ಲಿ ನೀಡುವಂತೆ ತಿಳಿಸಿದ ಅವರು, ಮಲ್ಪೆ ಬೀಚ್ ಹಾಗೂ ಸೀವಾಕ್ ಪ್ರದೇಶಗಳ ಅಂಗಡಿ ಗಳನ್ನು ಹಾಗೂ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಟೆಂಡರ್ ಪ್ರಕ್ರಿಯೆ ಮೂಲಕವೇ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಮಲ್ಪೆ ಬೀಚ್‌ನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳು ವಾಗ ಸ್ಥಳೀಯ ಸಂಪ್ರದಾಯಿಕ ಮೀನುಗಾರರೊಂದಿಗೆ ಸಮಾಲೋಚಿಸುವಂತೆ ಮನವಿ ಮಾಡಿದರು. ಸ್ಥಳೀಯರಿಗೆ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗದಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದವರು ಸಭೆಗೆ ತಿಳಿಸಿದರು.
ಜಿಲ್ಲೆಯ ಪ್ರವಾಸಿ ತಾಣಗಳನ್ನು ಸವಿಯಲು ಆಗಮಿಸುವ ಪ್ರವಾಸಿಗರಿಗೆ ಕಡಲ ತೀರದ ಮಾಹಿತಿಯ ಕೊರತೆ ಯಿಂದಾಗಿ ಕೆಲವು ಅವಘಡಗಳು ಉಂಟಾಗುತ್ತಿವೆ. ಮುಂದೆ ಹೀಗಾಗದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸುವ ಜೊತೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರದ ಕೋಡಿ ಕಡಲ ಕಿನಾರೆಯಲ್ಲಿರುವ ಸೀ ವಾಕ್‌ನಲ್ಲಿ ಪ್ರವಾಸಿಗರಿಗೆ ಅನುಕೂಲ ವಾಗುವಂತೆ ಉದ್ಯಾನವನ ನಿರ್ಮಾಣ, ಸಮುದ್ರ ವೀಕ್ಷಣೆಗೆ ಕುಳಿತುಕೊಳ್ಳಲು ಬೆಂಚ್ ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸು ವಂತೆ ತಿಳಿಸಿದರು.
ಬೀಚ್ ಹಾಗೂ ದ್ವೀಪಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಸರಕಾರದ ವತಿಯಿಂದ ಕೈಗೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಆಲೋಚಿಸುವುದು ಸೂಕ್ತ ಎಂದು ಕಿರಣ್ ಕೊಡ್ಗಿ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಂ., ಟೂರಿಸಂ ಅಸೋಸಿಯೇಷನ್‌ನ ಮನೋಹರ್ ಶೆಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಜಲಕ್ರೀಡೆಗೆ ವರದಿ ನೀಡಲು ಸೂಚನೆ
ಬೀಚ್‌ಗಳಲ್ಲಿ ಜಲ ಕ್ರೀಡೆಗಳು ಸೇರಿದಂತೆ ವಿವಿಧ ಜಲ ಸಾಹಸ ಕ್ರೀಡೆ ಗಳನ್ನು ಯೋಜಿಸಲು ಜಿಲ್ಲೆಯ ಯಾವ ಬೀಚ್‌ಗಳು ಸೂಕ್ತ ಎಂಬ ಬಗ್ಗೆ ವರದಿಯೊಂದನ್ನು ನೀಡುವಂತೆ ಕಳೆದ ವರ್ಷವೇ ನೇಶನಲ್ ಇನ್‌ಸ್ಟಿಟ್ಟೂಟ್ ಆಫ್ ವಾಟರ್ ಸ್ಪೋರ್ಟ್ಸ್‌ಗೆ ಸೂಚಿಸಲಾಗಿತ್ತು. ಆದರೆ ಈವರೆಗೆ ಈ ಸಂಸ್ಥೆ ವರದಿ ನೀಡಿರುವುದಿಲ್ಲ. ಕೂಡಲೇ ವರದಿ ಯನ್ನು ಅವರಿಂದ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸಿಗರ ಜೀವರಕ್ಷಣೆಗೆ ಅಗತ್ಯವಿರುವ ಜೆಟ್ ಸೀ ಬೈಕ್ ಅನ್ನು ಸರಬ ರಾಜು ಮಾಡಲು ಕೆಆರ್‌ಡಿಎಲ್ ಮುಖಾಂತರ ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.






