ಉಡುಪಿ ಸರಕಾರಿ ವಸತಿಗೃಹದಲ್ಲಿ ಕಳವು ಪ್ರಕರಣ: ಮಧ್ಯಪ್ರದೇಶದ ಇಬ್ಬರು ಆರೋಪಿಗಳ ಬಂಧನ

ರಮೇಶ್ - ಕಾಲಿಯಾ
ಉಡುಪಿ, ಜು.22: ಎರಡು ದಿನಗಳ ಹಿಂದೆ ನಗರದ ಮಿಷನ್ ಕಂಪೌಂಡಿನಲ್ಲಿರುವ ಲೋಕೋಪಯೋಗಿ ಇಲಾಖೆಯ ಸರಕಾರಿ ವಸತಿ ಗೃಹದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಇಬ್ಬರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಬಂಗಡ ಯಾನೆ ಬಾಂಗು ಯಾನೆ ರಮೇಶ್ ಜವಾನ್ ಸಿಂಗ್(37) ಹಾಗೂ ಕಾಲಿಯಾ ಯಾನೆ ಕಾಲು(25) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಪರಾರಿಯಾಗಿರುವ ಇನ್ನೊಬ್ಬ ಆರೋಪಿ ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜು.19ರಂದು ರಾತ್ರಿ ವಸತಿ ಗೃಹದಲ್ಲಿನ ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನ ದಲ್ಲಿ ಹೆಚ್ಚುವರಿ ಎಸ್ಪಿ ಸುಧಾಕರ ನಾಯ್ಕ ಹಾಗೂ ಡಿವೈಎಸ್ಪಿ ಪ್ರಭು ಡಿ.ಟಿ. ನಿರ್ದೇಶನದಲ್ಲಿ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ಬಡಿಗೇರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಈ ತಂಡವು ತನಿಖೆಯನ್ನು ತೀವ್ರಗೊಳಿಸಿ, ಉಡುಪಿ ಕರಾವಳಿ ಬೈಪಾಸ್ನ ರಾಷ್ಟ್ರೀಯ ಹೆದ್ದಾರಿ 66 ಬಳಿಯ ಸರ್ಕಸ್ ಗ್ರೌಂಡ್ನಲ್ಲಿನ ಸಿಸಿಟಿವಿ ದೃಶ್ಯಾವಳಿ ಗಳನ್ನು ಪರೀಶೀಲಿಸಿತು. ಇದರಲ್ಲಿ ಮಾಹಿತಿ ಪಡೆದು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ತಂಡ ಬಂಧಿಸಿದೆ ಎಂದು ತಿಳಿದುಬಂದಿದೆ.
ಬಂಧಿತರಿಂದ ಬೆಳ್ಳಿಯ ಆಭರಣಗಳಾದ ಕಾಲು ಗೆಜ್ಜೆ, ಸೊಂಟದ ನೇವಳ, ಕೈಬಳೆ, ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರಾಸ್ಲೈಟ್ ಸೇರಿ ಒಟ್ಟು 80,970ರೂ. ಮೌಲ್ಯದ 681.830 ಮಿಲಿ ಗ್ರಾಂ ಬೆಳ್ಳಿಯ ಸೊತ್ತು, 4,250ರೂ. ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣಾ ಎಸ್ಸೈಗಳಾದ ಭರತೇಶ್ ಕಂಕಣವಾಡಿ, ಈರಣ್ಣ ಶಿರಗುಂಪಿ, ನಾರಾಯಣ ಬಿ., ಗೋಪಾಲಕೃಷ್ಣ ಜೋಗಿ ಹಾಗೂ ಸಿಬ್ಬಂದಿ ಹರೀಶ್, ಪ್ರಸನ್ನ ಸಿ., ಬಶೀರ್, ಜಯಕರ್, ಇಮ್ರಾನ್, ಶಿವು ಕುಮಾರ್, ಹೇಮಂತ, ಆನಂದ, ಗಫೂರ್, ಸಂತೋಷ್ ರಾಥೋಡ್, ಮಲ್ಲಯ್ಯ, ಓಬಳೇಶ್, ಕಾರ್ತಿಕ್, ಕುಮಾರ್ ಕೊಪ್ಪದ್, ವಿನಯ್ ಕುಮಾರ್, ಸಂತೋಷ್ ಪಾಲ್ಗೊಂಡಿದ್ದರು.
ವಿವಿಧ ರಾಜ್ಯಗಳಲ್ಲೂ ಪ್ರಕರಣ ದಾಖಲು
ಬಂಧಿತ ಆರೋಪಿಗಳು ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ತಮ್ಮ ಸಹಚರರೊಂದಿಗೆ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿರುವುದರ ಬಗ್ಗೆ ತಿಳಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿಯೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿದೆ. ಈ ಕುರಿತು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ರಮೇಶ್ ಜವಾನ್ ಸಿಂಗ್ ವಿರುದ್ಧ ಈಗಾಗಲೇ ಬೇರೆ ರಾಜ್ಯದಲ್ಲಿ ಒಟ್ಟು 11 ಕಳ್ಳತನ ಪ್ರಕರಣಗಳು ಮತ್ತು ಕಾಲಿಯಾ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಶನಿವಾರ ಹಾಗೂ ರವಿವಾರದ ರಜಾ ದಿನಗಳಲ್ಲೇ ಇವರು ಕಳ್ಳತನ ಮಾಡಿಕೊಂಡಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.







