ಉಡುಪಿ | ‘ಅನ್ವೇಷಣಮ್’ ಕಾಮರ್ಸ್ ಫೆಸ್ಟ್: ಹಿರಿಯಡ್ಕ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಉಡುಪಿ, ಡಿ.12: ಬದುಕಿನ ಸವಾಲುಗಳನ್ನು ಅವಕಾಶಗಳಾಗಿ ಸ್ವಾಗತಿಸುತ್ತ ಉತ್ಸಾಹದ ಜೊತೆಗೆ ತಿಳುವಳಿಕೆಯನ್ನೂ ವರ್ಧಿಸಿಕೊಳ್ಳುವ ಮೂಲಕ ಸದಾ ಚಲನೆಯಲ್ಲಿರಬೇಕು ಎಂದು ಶಿಕ್ಷಣ ತಜ್ಞ ಎನ್.ಶೆಟ್ಟಿ ಹೇಳಿದ್ದಾರೆ.
ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಘಟಕ ಮತ್ತು ವಾಣಿಜ್ಯ ವಿಭಾಗಗಳ ವತಿಯಿಂದ ವಾಣಿಜ್ಯ ಸಂಘ ಹಾಗೂ ಕಾಮರ್ಸ್ ಫೆಸ್ಟ್ ಭಾಗವಾದ ‘ಅನ್ವೇಷಣಮ್’ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ವಹಿಸಿದ್ದರು. ಮಾಹೆಯ ಮಣಿಪಾಲ ಸ್ಕೂಲ್ ಆಫ್ ಕಾರ್ಮಸ್ ಮತ್ತು ಎಕಾನಾಮಿಕ್ಸ್ ನ ಸಹಾಯಕ ಪ್ರಾಧ್ಯಾಪಕ ಡಾ.ಸಂಕೇಚ್ ಲೇಡ್ವಾನಿ, ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾರ್ತಿ ಪೂರ್ಣಿಮಾ ಎಸ್. ಮುಖ್ಯ ಅತಿಥಿಗಳಾಗಿದ್ದರು.
ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಾಣಿಜ್ಯಕೋಶದ ಅಧ್ಯಾಪಕ ಸಲಹೆಗಾರ ನಂದೀಶ್ ಕುಮಾರ್ ಸಿ. ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ.ಸೌಮ್ಯಲತಾ ಪಿ. ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ನಿಶ್ಚಿತ ಎಸ್.ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪರ್ಣ ಕೆ.ಯು. ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಿದ್ಧನಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅಭಿನಂದನ್ ಮಾತನಾಡಿದರು. ವಸಂತ ಶೆಟ್ಟಿ ಚಿನ್ನಿಬೆಟ್ಟು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ವಿದ್ಯಾರ್ಥಿನಿ ಪಲ್ಲವಿ ಸ್ವಾಗತಿಸಿದರು. ವಿಘ್ನೇಶ್ ವಂದಿಸಿದರು. ಹಿರಿಯಡಕ ಸರಕಾರಿ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಬೈಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ದ್ವಿತೀಯ ಸ್ಥಾನ ಪಡೆಯಿತು.







