Udupi | ಅ.3ರಂದು ವಿವಿಧೆಡೆ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ

ಉಡುಪಿ : ಜಿಲ್ಲೆಯ ಜನತೆಯ ಅಹವಾಲುಗಳನ್ನು ಆಲಿಸಿ ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡಲು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳು ಅ.3ರಂದು ಬೆಳಗ್ಗೆ 10:00ಕ್ಕೆ ಜಿಲ್ಲೆಯ ವಿವಿಧೆಡೆ ನಡೆಯಲಿವೆ.
ಹೆಬ್ರಿ ತಾಲೂಕು ಕಚೇರಿ ಸಭಾಂಗಣದಲ್ಲಿ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ, ಬೈಂದೂರು ತಾಲೂಕು ಬೀಜೂರು ಗ್ರಾಮದ ಮುರ್ಗೋಳಿಹಕ್ಲು ನಂದಿಕೇಶ್ವರ ಸಭಾಭವನದಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಕುಂದಾಪುರದ ಕಾಳಾವರ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ, ಉಡುಪಿ ತಾಲೂಕು ಕಡೆಕಾರು ಗ್ರಾಮದ ನಿಡಂಬೂರು ಯುವಕ ಮಂಡಲ ಸಭಾ ಭವನದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಅಧ್ಯಕ್ಷತೆಯಲ್ಲಿ ಹಾಗೂ ಕಾಪು ತಾಲೂಕು ಪಾಂಗಾಳ ಗ್ರಾಮದ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಕಾಪು ತಹಶೀಲ್ದಾರ್ ಅನಂತ ಶಂಕರ್ ಅಧ್ಯಕ್ಷತೆಯಲ್ಲಿ, ಪ್ರಜಾಸೇವೆ ಆಂದೋಲನ ಸಭೆಗಳು ನಡೆಯಲಿವೆ.
ಸಾರ್ವಜನಿಕರು ಈ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಅಹವಾಲುಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಪಡೆಯಲು ಅರ್ಜಿ ಸಲ್ಲಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.






