ಉಡುಪಿ| ಬೈಕ್, ಮನೆಗೆ ನುಗ್ಗಿ ಕಳವು ಪ್ರಕರಣ: ಗುಜರಾತ್ ಮೂಲದ ಆರೋಪಿ ಸೆರೆ

ಕುಂದಾಪುರ, ಜೂ.14: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಕಳವು ಹಾಗೂ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ತಾಲೂಕಿನ ಲಾಲಾಜಿಬಾಯ್ ಬುದಾಬಾಯ್ ಸೊಲಂಕಿ(37) ಬಂಧಿತ ಆರೋಪಿ.
ಕುಂದಾಪುರ ಸಂಗಮ್ ಜಂಕ್ಷನ್ ಸಮೀಪದ ಮನೆಯೊಂದಕ್ಕೆ ಮಾ.18ರಂದು ರಾತ್ರಿ ನುಗ್ಗಿದ ಕಳ್ಳರು, 10,000 ರೂ. ನಗದು ಕಳವು ಮಾಡಿ ಕೊಂಡು ಹೋಗಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿತ್ತು. ಅದೇ ದಿನ ಕುಂದಾಪುರ ವಿನಯ್ ಆಸ್ಪತ್ರೆಯ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ನ್ನು ಕಳ್ಳರು ಕಳವು ಮಾಡಿರುವ ಬಗ್ಗೆಯೂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಆರೋಪಿ ವಿಳಾಸದ ಆದರಿಸಿ ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ಎಂಬಲ್ಲಿಗೆ ತೆರಳಿದ್ದರು. ಅಲ್ಲಿ ಆತನಿಗಾಗಿ ಹುಡುಕಾಟ ನಡೆಸಿದಾಗ ಆತ ಉತ್ತರಕನ್ನಡ ಜಿಲ್ಲೆಯ ಮುರಡೇಶ್ವರದಲ್ಲಿರುವ ಮಾಹಿತಿ ದೊರೆಯಿತು. ಅದರಂತೆ ಆತನನ್ನು ಮುರಡೇಶ್ವರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕುಂದಾಪುರದಲ್ಲಿ ಮನೆ ಹಾಗೂ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ ಕಳವು ಮಾಡಿದ ಬೈಕ್‌ನ್ನು ವಶಪಡಿಸಿ ಕೊಳ್ಳಲಾಗಿದೆ.
ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಹಾಗೂ ಕುಂದಾಫುರ ಪೊಲೀಸ್ ಠಾಣಾ ನಿರೀಕ್ಷಕ ಜಯರಾಮ್ ಡಿ.ಗೌಡ ನಿರ್ದೇಶನದಂತೆ ಠಾಣಾ ಎಸ್ಸೈಗಳಾದ ನಂಜಾನಾಯ್ಕ್ ಎನ್., ಪುಷ್ಪ ಹಾಗೂ ಸಿಬ್ಬಂದಿ ಮೋಹನ, ಸಂತೋಷ, ಪ್ರೀನ್ಸ್, ಮಹಾಬಲ ಶೆಟ್ಟಿಗಾರ, ಸಂತೋಷ ದೇವಾಡಿಗ, ಘನಶ್ಯಾಮ್ ಈ ಕಾರ್ಯಾಚರಣೆ ನಡೆಸಿದ್ದಾರೆ.






