ಉಡುಪಿ | ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

ಉಡುಪಿ, ಡಿ.9: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ(ಪ. ಪೂ.), ಶಾಲಾ ಶಿಕ್ಷಣ ಮತುತಿ ಸಾಕ್ಷರತಾ ಇಲಾಖೆ(ಪ. ಪೂ. ವಿಭಾಗ), ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವತಿಯಿಂದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಮಂಗಳವಾರ ಉಡುಪಿ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.
ಸ್ಪರ್ಧೆಯನ್ನು ಉದ್ಘಾಟಿಸಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಶಿಕ್ಷಣಕ್ಕೆ ಪೂರಕವಾದ ಕ್ರೀಡೆ, ಸಾಂಸ್ಕೃತಿಕ ಸಹಿತ ನಾನಾ ನೆಲೆಗಳಲ್ಲಿ ಸಮಾಜವನ್ನು ಕಟ್ಟುವ, ತಿದ್ದುವ ಕೆಲಸವಾಗಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶಿಕ್ಷಣೇತರ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆ, ಸಾಮರ್ಥ್ಯ ತೋರಬೇಕು. ನಾನಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಲು, ಬೆಳವಣಿಗೆ ಹೊಂದಲು ವಿವಿಧ ವಲಯಗಳಿಂದ ಪ್ರೋತ್ಸಾಹ ಅತ್ಯಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಾರುತಿ ಮಾತನಾಡಿ, ಸಾಂಸ್ಕೃತಿಕ ಸಮೃದ್ಧಿ, ವಿವಿಧತೆಯಲ್ಲಿ ಏಕತೆಯೇ ಭಾರತದ ಹೆಗ್ಗಳಿಕೆ. ಸೋಲು ಗೆಲುವನ್ನು ಸಮತೋಲನದಿಂದ ಸ್ವೀಕರಿಸಬೇಕು. ಕಠಿಣ ಪರಿಶ್ರಮವಿದ್ದರೆ ಸಾಧನೆ ಸಾಧ್ಯ ಎಂದು ತಿಳಿಸಿದರು.
ಪೂರ್ಣಪ್ರಜ್ಞ ಎಜುಕೇಶನ್ ಕೌನ್ಸಿಲ್ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಡಾ.ಶ್ರೀರಮಣ ಐತಾಳ್, ಪೂರ್ಣಪ್ರಜ್ಞ ಸ್ವಾಯತ್ತ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎ. ಮಾತನಾಡಿದರು. ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆಯ ಉಪ ಆಡಳಿತಾಧಿಕಾರಿ ಪುಂಡರೀಕಾಕ್ಷ ಕೊಡಂಚ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ ಭಟ್, ಉಡುಪಿ ಜಿಲ್ಲಾ ಅನುದಾನಿತ/ಅನುದಾನರಹಿತ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ದಯಾನಂದ ಪೈ, ಉಡುಪಿ ಜಿಲ್ಲಾ ಅನುದಾನಿತ/ಅನುದಾನರಹಿತ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ರಾವ್ ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂತೋಷ್ ಕುಮಾರ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ್ ನಾವುಡ ವಂದಿಸಿದರು.







