ಉಡುಪಿ: ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೊಗಳ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭ

ಉಡುಪಿ, ಸೆ.27: ಪರವಾನಿಗೆ ರಹಿತ ಕಟ್ಟಡ ಸಾಮಾಗ್ರಿ ಸಾಗಾಟ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸುತ್ತಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟ ಜಿಲ್ಲಾದ್ಯಂತ ಇಂದಿನಿಂದ ನೂರಾರು ಲಾರಿ ಹಾಗೂ ಟೆಂಪೊಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅನಿದಿಷ್ಟಾವಧಿ ಮುಷ್ಕರ ಆರಂಭಿಸಿವೆ.
ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಸ್ಥಗಿತಗೊಳಿಸಿ ಉಡುಪಿ ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ, ಕೋಟ, ಕುಂದಾಪುರ, ಕಾರ್ಕಳಗಳ ರಸ್ತೆ ಬದಿಗಳಲ್ಲಿಯೂ ನೂರಾರು ಲಾರಿ ಮತ್ತು ಟೆಂಪೊಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಲಾಗಿದೆ. ಸ್ಥಳದಲ್ಲಿ ಲಾರಿ ಹಾಗೂ ಟೆಂಪೋ ಚಾಲಕರು ಸೇರಿದಂತೆ ನೂರಾರು ಕಾರ್ಮಿಕರು ಜಮಾಯಿಸಿದ್ದು, ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸರಕಾರಗಳ ಮತ್ತು ಸಂಬಂಧಪಟ್ಟ ಇಲಾಖೆಗಳ ನಿರ್ಧಾರಗಳೇ ಇಂದು ಸಮಸ್ಯೆಯಾಗಿ ಉದ್ಭವಿಸಿದೆ. ಇದು ನಮ್ಮ ಸಮಸ್ಯೆ ಅಲ್ಲ. ಲಾರಿಯವರನ್ನು ದಂಧೆ ಕೋರರಂತೆ ಬಿಂಬಿಸಲಾಗುತ್ತಿದೆ. ಹಾಗಾದರೆ ಈ ಹಿಂದೆ ಇದ್ದ ಐಎಎಸ್, ಐಪಿಎಸ್ ಅಧಿಕಾರಿಗಳು ಯಾಕೆ ಈ ರೀತಿ ಕ್ರಮ ತೆಗೆದುಕೊಂಡಿಲ್ಲ. ನಾವು ಹಿಂದಿನಿಂದಲೂ ಯಾವುದೇ ಪರವಾನಿಗೆ ಇಲ್ಲದೆಯೇ ಶಿಲೆಕಲ್ಲು, ಕೆಂಪುಕಲ್ಲು, ಜಲ್ಲಿ, ಮರಳು ಸೇರಿದಂತೆ ಕಟ್ಟಡ ಸಾಮಗ್ರಿಗಳನ್ನು ಸಾಗಿಸುತ್ತಿದ್ದೇವೆ. ಆಗ ಯಾಕೆ ಶಿಸ್ತುಬದ್ಧ ಕ್ರಮ ಕೈಕೊಂಡಿಲ್ಲ. ಇವರು ಯಾಕೆ ಪರವಾನಿಗೆ ವ್ಯವಸ್ಥೆ ಮಾಡಿಲ್ಲ. ನಮ್ಮನ್ನು ಬಲಿಪಶು ಮಾಡಲಾಗುತ್ತಿದೆ. ಲಾರಿ ಚಾಲಕರನ್ನು ಹಿಡಿದು ದೊಡ್ಡ ಮಟ್ಟದ ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಒಕ್ಕೂಟದ ಪ್ರಮುಖರಾದ ರಾಘವೇಂದ್ರ ಶೆಟ್ಟಿ ಆರೋಪಿಸಿದ್ದಾರೆ.
ಸೆ.29ರಂದು ಉದ್ಯಾವರ ಬಲಾಯಿಪಾದೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಲ್ನಾಡಿಗೆ ಜಾಥಾವನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತದೆ. ಮುಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ನ್ಯಾಯ ಸಿಗುವವರೆಗೆ ನಿರಂತರ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದ್ದಾರೆ.
‘ಇದು ಬಡವರಿಗೆ ಸಂಬಂಧಪಟ್ಟ ಕ್ಷೇತ್ರ. ಇಲ್ಲಿ ಎಲ್ಲರೂ ದುಡಿದು ತಿನ್ನುವರೇ ಇರುವುದು. ಇವರನ್ನು ನಂಬಿ ಸಾವಿರಾರು ಮಂದಿ ಇದ್ದಾರೆ. ಆದುದರಿಂದ ಜಿಲ್ಲಾಡಳಿತ ಎಲ್ಲವೂ ಕಾನೂನು ರೀತಿಯಲ್ಲಿ ವರ್ತಿಸದೆ ಮಾನವೀಯ ದೃಷ್ಟಿ ಇಟ್ಟುಕೊಂಡು ಲಾರಿಯವರಿಗೆ ರಿಯಾಯಿತಿ ನೀಡಬೇಕು. ಬಡವರು ಬದುಕು ನಡೆಸಲು ಅನುಕೂಲವಾಗುವ ರೀತಿಯಲ್ಲಿ ಹೊಂದಾಣಿಕೆ ಮಾಡಬೇಕು. ಈ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ನ್ಯಾಯಸಮ್ಮತವಾಗಿ ದುಡಿದು ತಿನ್ನಲು ಪರಾನಿಗೆ ವ್ಯವಸ್ಥೆಯನ್ನು ಮಾಡಿಕೊಡಬೇಕು’ ಎಂದು ಮುಖಂಡ ಬಿ.ಬಿ.ಪೂಜಾರಿ ಒತ್ತಾಯಿಸಿದ್ದಾರೆ.
ಉದ್ಯಾವರ ಬಲಾಯಿಪಾದೆಯ ಮುಷ್ಕರದ ಸ್ಥಳಕ್ಕೆ ಆಗಮಿಸಿದ ಕಾಪು ಎಸ್ಸೈ ಅಬ್ದುಲ್ ಖಾದರ್ ಮುಷ್ಕರ ನಿರತರ ಮನವೊಲಿಸಲು ಪ್ರಯತ್ನಿಸಿದರು. ರಸ್ತೆ ಬದಿಯ ವಾಹನಗಳನ್ನು ಬೇರೆ ಕಡೆ ನಿಲ್ಲಿಸುವಂತೆ ತಿಳಿಸಿದರು. ಆದರೆ ಮುಷ್ಕರ ನಿರತರು ಇದಕ್ಕೆ ಒಪ್ಪದೆ ಮುಷ್ಕರ ಮುಂದುವರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ರಮೇಶ್ ಶೆಟ್ಟಿ, ಮನೋಹರ್ ಕುಂದರ್, ಕೃಷ್ಣ ಅಂಬಲಪಾಡಿ ಮೊದಲಾದವರು ಉಪಸ್ಥಿತರಿದ್ದರು.
ರಸ್ತೆ ಬದಿ ವಾಹನ ನಿಲುಗಡೆ: ಪೊಲೀಸ್ ನೋಟಿಸ್
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆ ಬದಿ ನಿಲ್ಲಿಸಲಾದ ಲಾರಿ ಮತ್ತು ಟೆಂಪೋ ಮಾಲಕರಿಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಈ ವಾಹನಗಳಿಂದ ರಸ್ತೆಯಲ್ಲಿ ಸಾಗುವ ಯಾವುದೇ ವಾಹನಗಳಿಗೆ ತೊಂದರೆ ಅಥವಾ ಅಪಘಾತವಾದರೆ ರಸ್ತೆ ಬದಿ ನಿಲ್ಲಿಸಲಾದ ವಾಹನಗಳ ಮಾಲಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.
‘ನಮ್ಮ ವಾಹನಗಳಿಂದ ಅಪಘಾತ ಸಂಭವಿಸಿದರೆ ನಾವೇ ಜವಾಬ್ದಾರರು ಎಂಬ ಪೊಲೀಸ್ ನೋಟಿಸ್ ಗೆ ನಾವು ಯಾರು ಕೂಡ ಸಹಿ ಹಾಕುತ್ತಿಲ್ಲ. ಈ ವಿಚಾರ ನೆಪವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಎಲ್ಲಿಯಾದರೂ ನಮ್ಮ ಚಾಲಕರ ಮೇಲೆ ದಬ್ಬಾಳಿಕೆ ಮಾಡಿದರೆ ನಾವು ಎಲ್ಲ ವಾಹನಗಳನ್ನು ಆಯಾ ಠಾಣೆಯಲ್ಲಿ ಇರಿಸಿ ನಮ್ಮನ್ನು ಬಂಧಿಸಿ ಎಂಬ ಆಂದೋಲನ ಮಾಡುತ್ತೇವೆ. ಇಲ್ಲಿ ಯಾವುದೇ ಅನಾಹುತ ಅಥವಾ ಜೀವಹಾನಿಯಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ’ ಎಂದು ರಾಘವೇಂದ್ರ ಶೆಟ್ಟಿ ಎಚ್ಚರಿಸಿದ್ದಾರೆ.







