ಉಡುಪಿ| ಅಂತರಾಜ್ಯ ಬೈಕ್ ಕಳವು ಆರೋಪಿಗಳ ಬಂಧನ

ಉಡುಪಿ, ಜ.13: ಉಡುಪಿ ಕರಾವಳಿ ಬೈಪಾಸ್ ಬಳಿ ಕೆಲ ದಿನಗಳ ಹಿಂದೆ ನಡೆದ ಬೈಕ್ ಕಳ್ಳತನಕ್ಕೆ ಸಂಬಂಧಿಸಿ ಇಬ್ಬರು ಅಂತರಾಜ್ಯ ಕಳವು ಆರೋಪಿಗಳನ್ನು ಉಡುಪಿ ಪೊಲೀಸರು ಜ.4ರಂದು ಕೇರಳ ರಾಜ್ಯದ ಕೋಯಿಕ್ಕೋಡು ಜಿಲ್ಲೆ ಮುಕ್ಕಂ ಎಂಬಲ್ಲಿ ಬಂಧಿಸಿದ್ದಾರೆ.
ಕೇರಳ ರಾಜ್ಯದ ಎರ್ನಕುಲಂ ಜಿಲ್ಲೆಯ ಆಶಿಕ್ ಅನ್ಸಾರ್(19) ಹಾಗೂ ಅಲ್ತಾಫ್(23) ಬಂಧಿತ ಆರೋಪಿಗಳು. ಇವರಿಂದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಮೂಡನಿಡಂಬೂರು ಗ್ರಾಮದ ನಾಗಚಂದ್ರ ಎಂಬವರು ಡಿ.28ರಂದು ರಾತ್ರಿ ಕರಾವಳಿ ಬೈಪಾಸ್ ಬಳಿ ನಿಲ್ಲಿಸಿದ್ದ 70,000ರೂ. ಮೌಲ್ಯದ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಉಡುಪಿ ಡಿವೈಎಸ್ಪಿ ಡಿಟಿ ಪ್ರಭು ನಿರ್ದೇಶನದಲ್ಲಿ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭರತೇಶ ಕಂಕಣವಾಡಿ, ಗೋಪಾಲಕೃಷ್ಣ ಜೋಗಿ ನೇತೃತ್ವದಲ್ಲಿ ಪ್ರಸನ್ನ ಸಿ., ಸಂತೋಷ್ ರಾತೋಡ್, ಮಲ್ಲಯ್ಯ ಹಿರೇಮಠ್, ಶಿವಕುಮಾರ್ ಅವರನ್ನೊಳಗೊಂಡ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.
ಆಶಿಕ್ ಅನ್ಸಾರ್ ವಿರುದ್ಧ ಕೇರಳ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಒಂದು ಮನೆಕಳ್ಳತನ ಪ್ರಕರಣ, ಇನ್ನೊಂದು ಗಾಂಜಾ ಸೇವನೆ ಪ್ರಕರಣಗಳಾಗಿವೆ. ಅಲ್ತಾಫ್ ವಿರುದ್ಧ ಕೇರಳ ರಾಜ್ಯದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 3 ಕಳ್ಳತನ ಪ್ರಕರಣಗಳು, 2 ಗಾಂಜಾ ಸೇವನೆ ಪ್ರಕರಣ ಪ್ರಕರಣಗಳಾಗಿವೆ.







