ಉಡುಪಿ : ವಿಜಯನಗರ ಕಾಲದ ಕನ್ನಡ-ತುಳು ಭಾಷೆಯ ಶಾಸನ ಪತ್ತೆ

ಉಡುಪಿ, ಅ.31: ವಿಜಯನಗರ ಆಳ್ವಿಕೆಯ ಕಾಲದ ಕನ್ನಡ-ತುಳು ಮಿಶ್ರಿತ ಭಾಷೆಯ ಹಾಗೂ ಕನ್ನಡ ಲಿಪಿಯ ಶಿಲಾ ಶಾಸನವೊಂದು ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ನಂದಳಿಕೆಯ ಕೆದಿಂಜೆ ಜುಮಾದಿ ವೈವಸ್ಥಾನದ ಬಳಿಯ ದಾಸಂದ ಬಾಕ್ಯಾರ್ ಎಂಬಲ್ಲಿ ಪತ್ತೆಯಾಗಿದೆ.
ಇದು ಸಂಗಮ ರಾಜ ಮನೆತನದ ಎರಡನೇ ಹರಿಹರನ ಆಳ್ವಿಕೆ ಸಂಬಂಧಿಸಿದ ಅಪೂರ್ವ ದಾಖಲೆಯಾಗಿದೆ ಎಂದು ಪುರಾತತ್ವ ಶಾಸ್ತ್ರಜ್ಞ, ಉಡುಪಿಯ ಅದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸಂಚಾಲಕ, ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಈ ಅಪರೂಪದ ಆಕರ್ಷಕ ಶಿಲಾ ಶಾಸನವನ್ನು ಕನ್ನಡ-ತುಳು ಮಿಶ್ರಿತ ಭಾಷೆ ಹಾಗೂ ಕನ್ನಡ ಲಿಪಿಯಲ್ಲಿ ಬರೆಯ ಲಾಗಿದೆ. ಇದನ್ನು ಬಳಪದ ಕಲ್ಲಿನ ಮೇಲೆ ಕೆತ್ತಲಾಗಿದೆ. ಈ ಶಾಸನವನ್ನು ಮೊದಲು ಗುರುತಿಸಿ ತಮ್ಮ ಗಮನಕ್ಕೆ ತಂದವರು ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿನ ಪ್ರಥಮ ಬಿ.ಎ. ಪುರಾತತ್ತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಸಿಂಚಿತ್ ಎಂ ಮತ್ತು ಶೋಧನ್ ಬಿ ಎಂದು ಪ್ರೊ.ಟಿ. ಮುರುಗೇಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸನದ ವಿವರ: 46.5ಸೆ.ಮೀ. ಎತ್ತರ ಹಾಗೂ 23 ಸೆ.ಮೀ. ಅಗಲದ 34 ಸಾಲುಗಳನ್ನೊಳಗೊಂಡ ಈ ಶಾಸನ, ಸ್ವಸ್ತಿಕ ಲಾಂಛನ ಮತ್ತು ಶೈವ ಸ್ತುತಿಯೊಂದಿಗೆ ಆರಂಭವಾಗಿದ್ದು, ನಂತರ, ಕಾಲಮಾನವನ್ನು ಶಕ ವರ್ಷ 1039, ಪ್ರಭವ ಸಂವತ್ಸರ, ಬ3 ಎಂದು ಉಲ್ಲೇಖಿಸಲಾಗಿದೆ. ಈ ಕಾಲಮಾನವು ಕ್ರಿ.ಶ.1116-17ಕ್ಕೆ ಸೇರುತ್ತದೆ. ಆದರೆ, ವಿಜಯನಗರದ ಯಾವುದೇ ಕಾಲಕ್ಕೆ ಇದು ತಾಳೆಯಾಗುವುದಿಲ್ಲ. ಆದ್ದರಿಂದ ಶಾಸನೋಕ್ತ ಕಾಲಮಾನವು ತಪ್ಪಾಗಿ ನಮೂದಿಸಲ್ಪಟ್ಟಿದೆಯೆಂದು ತಿಳಿಯುತ್ತದೆ. ಶಕ ವರ್ಷ 1309 ಉದ್ದೇಶಿತ ಕಾಲಮಾನವಾಗಿ ಇದ್ದಿರಬಹುದೆಂದು ಶಾಸನದ ಇತರೆ ಮಾಹಿತಿಗಳಿಂದ ತಿಳಿದುಬರುತ್ತದೆ.
ಶಕ 1309, ಶಾಸನೋಕ್ತ ಪ್ರಭವ ಸಂವತ್ಸರಕ್ಕೆ ಸರಿಹೊಂದುತ್ತದೆ ಹಾಗೂ ಕ್ರಿ.ಶ.1386ರಲ್ಲಿ ಮಹಾಪ್ರಧಾನ ಮಲ್ಲಪ್ಪ ಒಡೆಯರು, ಬಾರಕೂರು ರಾಜ್ಯದ ರಾಜ್ಯಪಾಲರಾಗಿದ್ದರೆಂದು ನೀಲಾವರ ಮತ್ತು ಆತ್ರಾಡಿಯ ಶಾಸನ ದಿಂದ ತಿಳಿದುಬರುತ್ತದೆ. ಪ್ರಸ್ತುತ ಶಾಸನವೂ ಸಹ ಮಲ್ಲಪ್ಪ ಒಡೆಯರು ಬಾರಕೂರಿನ ರಾಜ್ಯಪಾಲರಾಗಿದ್ದ ವಿಷಯ ವನ್ನು ತಿಳಿಸುತ್ತದೆ. ಆದ್ದರಿಂದ, ಶಾಸನವು ಎರಡನೇ ಹರಿಹರನ ಹತ್ತನೇ ವರ್ಷದ ಆಳ್ವಿಕೆಯ ಶಾಸನವಾಗಿದ್ದು, ಕ್ರಿ.ಶ. 1387ಕ್ಕೆ ಸೇರಿದೆಯೆಂದು ನಿರ್ಣಯಿಸಬಹುದು ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
ಶಾಸನವು ಎರಡನೇ ಹರಿಹರನನ್ನು, ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಸಮುದ್ರಾಧೀಶ್ವರಂ, ಎಂದರೆ ಮೂರು ಸಮುದ್ರಗಳಿಂದ ಸುತ್ತುವರೆಯಲ್ಪಟ್ಟ ಪ್ರದೇಶವನ್ನು ಶ್ರೀವೀರ ಹರಿಯಪ್ಪ ವೊಡೆಯರು (ಸಾಂಬ್ರಾಜ್ಯ ಸ್ತಾಯಿಗಳಾಗಿದ್ದಲ್ಲಿ), ಆ ಹರಿಯಪ್ಪ ವೊಡೆಯರ ನಿರೂಪದಿಂದ ಮನ್ಮಹಾ ಪ್ರಧಾನ ಮಲ್ಲಪ್ಪವೊಡೆಯರು ಬಾರಕೂರು ರಾಜ್ಯವನು ಆಳುತ್ತಿದ್ದರೆಂದು ಶಾಸನ ತಿಳಿಸುತ್ತದೆ.
ನಂತರ, ಶಾಸನದಲ್ಲಿ ಆ ಮಲ್ಲಪ್ಪ ವೊಡೆಯರು ದತ್ತಾಳ್ವರ ಬಳಿಯ ರಾಜ್ಯವನು, ಸಂಗಣ ಜಯರ‌್ಸರಿಗೆ ಕೊಟ್ಟರೆಂದು ತಿಳಿಸುತ್ತದೆ. ಆ ಜಯರ‌್ಸರು, ನಂದಳಿಕೆ ಎರಡು ಬಾಳನ್ನು ಕೋಟೀಶ್ವರಾಳ್ವ ಮತ್ತು ಕಡಂಬಾಳ್ವರೆಂಬ ಅಣ್ಣ ತಮ್ಮಂದಿರಿಗೆ ಬ್ರಹ್ಮಾದಾಯವಾಗಿ ನೀಡಿದ ವಿಷಯವನ್ನು ಶಾಸನ ನಿರೂಪಿಸುತ್ತದೆ.
ಈ ಎರಡೂ ಬಾಳಿನವರು, ಕಾರಕಳದ ಬ್ರಹ್ಮೀಸ್ವರ ದೇವರಿಗೆ ಪುರಾಣವನ್ನು ಹೇಳುವ ಬ್ರಾಣಂಗೆ ಪ್ರತಿವರ್ಷ ಆರು ಮೂಡೆ ಭತ್ತವನ್ನು ತಪ್ಪದೆ ನೀಡಬೇಕೆಂದು ಜಯರ‌್ಸರು ಮಾಡಿದ ಧರ್ಮದ ಅಡಕದ ಬಗ್ಗೆ ಪ್ರಸ್ಥಾಪವಿದೆ. ಈ ಅಡಕಕ್ಕೆ ತಪ್ಪಿದವರು ಅರಸನಿಗೆ ಗದ್ಯಾಣ 500, ದೇವರಿಗೆ ಗದ್ಯಾಣ 250 ನೀಡಬೇಕೆಂದು ತಿಳಿಸುತ್ತದೆ.
ಶಾಸನವನ್ನು ಬರೆದವನು, ಜಯ ಅರ‌್ಸರ ಸೇನಭೋವ ವಿಟ್ಟಣ್ಣ ಎಂಬುವನು. ಕೊನೆಯಲ್ಲಿ ಶಾಪಾಶಯದೊಂದಿಗೆ ಮಂಗಳ ಹಾಡಲಾಗಿದೆ. ಶಾಸನದಲ್ಲಿ, ಸಂಭುವೇ, ಸಾಲೆತ್ತಿಯ, ನಟ್ಟು, ಕಿನ್ನಿ, ಯಿಲಡ ಮುಂತಾದ ತುಳು ಶಬ್ದಗಳು ಆಯಾಚಿತವಾಗಿ ಬಳಕೆಯಾಗಿವೆ ಎಂದು ಪ್ರೊ.ಮುರುಗೇಶಿ ವಿವರಿಸಿದ್ದಾರೆ.
ಶಾಸನದ ಮಹತ್ವ: ಶಾಸನವು ಮಧ್ಯಯುಗೀನ ನಂದಳಿಕೆಯ ಅರಸು ಮನೆತನದ ಆರಂಭಿಕ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತದೆ. ಸಾಲೆತ್ತಿ ಬಳಿಯ ದಾಸೆಟ್ಟಿಯರ ಅಳಿಯ ಕೋಟೀಶ್ವರಾಳ್ವರು. ಈ ಕೋಟೀಶ್ವರಾಳ್ವರು ನಂದಳಿಕೆಯ ಜನನದ ಸೊಪ್ಪಿಕ್ಕಿದರು ಅಂದರೆ 1387ರಲ್ಲಿ ನಂದಳಿಕೆಯ ಅರಮನೆ ಕಟ್ಟಿಸಿದರು ಎಂದು ಈ ಶಾಸನದಿಂದ ತಿಳಿದು ಬರುತ್ತದೆ. ಶಾಸನೋಕ್ತ ಸಂಗಣ ಜಯ ಅರ‌್ಸರು ಯಾರು? ಕಾರ್ಕಳದ ಬ್ರಹ್ಮೀಸ್ವರ ದೇವರ ದೈವಸ್ಥಾನ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ಅಪರೂಪ ಶಾಸನದ ಅಧ್ಯಯನದಲ್ಲಿ ನಂದಳಿಕೆ ಅರಮನೆಯ ಸುಹಾಸ್ ಹೆಗ್ಡೆ, ಸರಳಾ ಎಸ್ ಹೆಗ್ಡೆ, ಮೂಲ್ಕಿಯ ಗಜನಿ ಫೌಂಡೇಶನ್‌ನ ಅಧ್ಯಕ್ಷ ಸುರೇಶ್ ಚಿತ್ರಾಪು ಮತ್ತು ರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ರಘುರಾಮ್ ಶೆಟ್ಟಿ ಗುಳ್ಳಾಡಿ ಸಹಕಾರ ನೀಡಿದ್ದಾರೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.






