ಉಡುಪಿ | ಡಿ.4, 5ರಂದು ಕೋಟೇಶ್ವರದ ಕೋಡಿಹಬ್ಬ: ವಾಹನಗಳ ಪಾರ್ಕಿಂಗ್ ಗೆ ಸ್ಥಳ ನಿಗದಿ

ಸಾಂದರ್ಭಿಕ ಚಿತ್ರ PC | GROK
ಉಡುಪಿ, ಡಿ.3: ಕುಂದಾಪುರ ತಾಲೂಕು ಕೋಟೇಶ್ವರದ ಇತಿಹಾಸ ಪ್ರಸಿದ್ಧ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ (ಕೋಡಿ ಹಬ್ಬ) ಡಿ.4 ಮತ್ತು 5ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕೋಟೇಶ್ವರ ರಥಬೀದಿ ರಸ್ತೆಯನ್ನು ಹಾಗೂ ದೇವಸ್ಥಾನದ ಆಸುಪಾಸಿನ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು.
ಈ ಪ್ರಯುಕ್ತ ಜಾತ್ರೆಗೆ ಆಗಮಿಸುವ ಭಕ್ತಾದಿಗಳು ತಮ್ಮ ವಾಹನಗಳನ್ನು ಈ ಕೆಳಕಂಡ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬಹುದು ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕುಂಭಾಶಿ, ವಕ್ವಾಡಿ, ತೆಕ್ಕಟ್ಟೆ, ಉಡುಪಿ ಕಡೆಯಿಂದ ಬರುವವರಿಗೆ :
ಸರಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರದ ಶಾಲಾ ಮೈದಾನದ ಮುಂಬಾಗದ ಖಾಲಿ ಸ್ಥಳ, ಅರಸುಬೆಟ್ಟು ಕ್ರಾಸ್ ರಸ್ತೆ ಬಳಿ ಇರುವ ಖಾಲಿ ಸ್ಥಳ, ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಶಾಲಾ ಮೈದಾನದ ಹಿಂಭಾಗ (ರಾ.ಹೆ.66ರ ಪಕ್ಕದಲ್ಲಿ ಇರುವ ಖಾಲಿ ಸ್ಥಳ).
ಹಾಲಾಡಿ, ಕಾಳಾವರ ಕಡೆಯಿಂದ ಬರುವವರಿಗೆ :
ಕೋಟೇಶ್ವರ ವರದರಾಜ ಕಾಲೇಜಿನ ಬಳಿಯ ಖಾಲಿ ಸ್ಥಳ, ಕಾಗೇರಿಯ ಬ್ರಿಡ್ಜ್ ಬಳಿ ಇರುವ ಖಾಲಿ ಸ್ಥಳ, ಅಂಶು ಮೆಡಿಕಲ್ ಮುಂಭಾಗದ ಖಾಲಿ ಸ್ಥಳ, ಕೋಟೇಶ್ವರ ಪಿಎಚ್ಸಿ ಬಳಿ ಇರುವ ಖಾಲಿ ಸ್ಥಳ.
ಕುಂದಾಪುರ-ಬೈಂದೂರು ಕಡೆಗಳಿಂದ ಬರುವವರಿಗೆ :
ಸಹನಾ ಹೋಟೆಲ್ ಮುಂಭಾಗದ ಖಾಲಿ ಸ್ಥಳ, ಆರ್ಯ ಹೋಟೆಲ್ ಬಳಿಯ ಖಾಲಿ ಸ್ಥಳ, ಐತಾಳ್ಬೆಟ್ಟು ರಸ್ತೆ ಕ್ರಾಸ್ನ ಖಾಲಿ ಸ್ಥಳ.
ಕೋಡಿ, ಹಳೆಅಳಿವೆ, ಕೊರವಡಿ, ಇತರ ಕಡೆಗಳಿಂದ ಬರುವವರಿಗೆ :
ಕೋಟಿಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸುರೇಶ್ ಬೆಟ್ಟಿನ್ ಮನೆಯವರ ಖಾಲಿ ಜಾಗ, ಕಿನಾರ-ಕೋಡಿ ರಸ್ತೆಯಲ್ಲಿರುವ ಶಾಹಿನಗರದ ಬಳಿ ಇರುವ ಖಾಲಿ ಸ್ಥಳ.
ಮದ್ಯಮಾರಾಟ ನಿಷೇಧ :
ಜಾತ್ರೆಯ ಸಂದರ್ಭದಲ್ಲಿ ಬಾರ್ ಮತ್ತು ವೈನ್ಶಾಪ್ ಗಳು ತೆರೆದಿದ್ದಲ್ಲಿ ಮದ್ಯಪಾನಾಸಕ್ತರು ಕುಡಿದು ಗಲಾಟೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ದೇಶಿಯ ಮದ್ಯ ಮಾರಾಟ) ನಿಯಮಗಳು 1968ರ ನಿಯಮದಡಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕೋಟೇಶ್ವರ ಗ್ರಾಮ ವ್ಯಾಪ್ತಿಯಲ್ಲಿ ಡಿ.4ರ ಬೆಳಗ್ಗೆ 6 ಗಂಟೆಯಿಂದ ಡಿ.5ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ಗಳ ಮದ್ಯ ಮಾರಾಟವನ್ನು ನಿಷೇಧಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಗ್ರಾಮ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.







