Udupi | 15 ದಿನವೂ ಮುಂದುವರೆದ ಕೊರಗರ ಅಹೋರಾತ್ರಿ ಧರಣಿ

ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ(ಕರ್ನಾಟಕ- ಕೇರಳ)ದ ವತಿಯಿಂದ ಕೊರಗ ಸಮುದಾಯದ ಯುವಜನರಿಗೆ ಉದ್ಯೋಗ ಭದ್ರತೆ, ನೇರ ನೇಮಕಾತಿಗೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಳೆದ 15 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ಬಗ್ಗೆ ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಖಂಡಿಸಿ ಸೋಮವಾರ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಸಂಯೋಜಕ ಕೆ.ಪುತ್ರನ್ ಹೆಬ್ರಿ, ನೇರ ನೇಮಕಾತಿ ವಿಚಾರದಲ್ಲಿ ಈ ಹಿಂದೆ ಪ್ರತಿಭಟನೆ ಕೈಗೊಂಡಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಭರವಸೆಯ ಮೇರೆಗೆ ಧರಣಿ ಕೈ ಬಿಡಲಾಗಿತ್ತು. ಇದೀಗ 16 ತಿಂಗಳಾದರೂ ಈ ಬಗ್ಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾಧಿಕಾರಿ ಕಚೇರಿ ಮುಂದೆ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ. ಸಮು ದಾಯದ ವಿದ್ಯಾವಂತ ಯುವಕರು ಕೆಲಸದ ಭರವಸೆಯನ್ನೇ ಬಿಟ್ಟಿದ್ದಾರೆ ಎಂದು ತಿಳಿಸಿದರು.
ಅಹೋರಾತ್ರಿ ಧರಣಿಯಲ್ಲಿ ಕೊರಗ ಸಮುದಾಯ ಮುಖಂಡರ ಜೊತೆ ಸಮುದಾಯದ ವಿದ್ಯಾವಂತ ಯುವಕ-ಯುವತಿಯರು ಪಾಲ್ಗೊಂಡಿದ್ದು, ಜಿಲ್ಲಾಡಳಿತದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ‘ನಾನು ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದರೂ ನನಗೆ ಅರ್ಹ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗಕ್ಕಾಗಿ ಸಾಕಷ್ಟು ಅರ್ಜಿಗಳನ್ನು ಸಲ್ಲಿಸಿದ್ದೇನೆ. ಕೊರಗ ಸಮುದಾಯ ಎಂಬ ಕಾರಣಕ್ಕೆ ನಮಗೆ ಸರಕಾರಿ, ಖಾಸಗಿ ವಲಯದಲ್ಲೂ ಕೆಲಸ ಸಿಗುತ್ತಿಲ್ಲ. ಕಸ ಗುಡಿಸುವುದು, ಶುಚಿತ್ವಕ್ಕೆ ಕರೆದು ಕೆಲಸ ಕೊಡುತ್ತಾರೆ. ಆದರೆ ಗ್ರೂಪ್ ಡಿ ಹುದ್ದೆಗೂ ನಮ್ಮನ್ನು ಸೇರಿಸಿಕೊಳ್ಳುತ್ತಿಲ್ಲ’ ಎಂದು ಪ್ರವೀಣ್ ಅಳಲು ತೋಡಿಕೊಂಡರು.
ಎಂಎಸ್‌ಡಬ್ಲ್ಯು ಪದವೀಧರೆ ದಿವ್ಯಾ ಮಾತನಾಡಿ, ‘ಸರಕಾರ ಕೂಡಲೇ ಸಮುದಾಯದ ಅರ್ಹ ನಿರುದ್ಯೋಗಿ ಯುವಕರಿಗೆ ಪಿವಿಟಿಜಿ ಸಮುದಾಯದ ಗುಣಲಕ್ಷಣಗಳ ಆಧಾರದಲ್ಲಿ ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ರಾಜ್ ಇಲಾಖೆ, ಕಂದಾಯ ಮತ್ತು ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಿತ ಇತರೆ ಇಲಾಖೆಯಲ್ಲಿ ವಿಶೇಷ ನೇರ ನೇಮಕಾತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಧರಣಿ ನಿರತ ಸ್ಥಳಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ (ಐಟಿಡಿಪಿ)ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಎಂ., ಉಡುಪಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಭೇಟಿ ನೀಡಿ, ಧರಣಿನಿರತರ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಮುಖಂಡರಾದ ಬೊಗ್ರ ಕೊಕ್ಕರ್ಣೆ, ವಿ.ಸಂಜೀವ ಬಾರ್ಕೂರು, ಶೇಖರ್ ಕೆಂಜೂರು, ದಿವಾಕರ ಕೆಂಜೂರು, ಶಕುಂತಳಾ, ಭಾರತಿ, ಪ್ರಮೋದ್ ಹೆಬ್ರಿ ಮೊದಲಾದವರು ಉಪಸ್ಥಿತರಿದ್ದರು.
‘ಊರಿನಲ್ಲಿ ಕೆಲಸ ಸಿಗದೇ ಕನಿಷ್ಠ ವೇತನಕ್ಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಸಮುದಾಯದಲ್ಲಿ ವಿದ್ಯಾವಂತರಿಲ್ಲ ಎಂದು ಹೇಳುತ್ತಿದ್ದ ಇಲಾಖೆ ಈಗ ಸ್ನಾತಕೋತ್ತರ ಪದವಿ ಮುಗಿಸಿ ಹೊರಗೆ ಬಂದರೂ ಕೆಲಸ ನೀಡುವುದಕ್ಕೆ ಹಿಂದೇಟು ಹಾಕುತ್ತಿದೆ. ಕೊರಗರು ಎಂಬ ಕಾರಣಕ್ಕೆ ಶೌಚಾಲಯ ಶುಚಿಗೊಳಿಸುವುದು, ಶುಚಿತ್ವಕ್ಕೆ ನಮ್ಮನ್ನು ಸೀಮಿತಗೊಳಿಸುವ ವ್ಯವಸ್ಥೆ ನಡೆಯುತ್ತಿದೆ. ನಮ್ಮನ್ನು ಅಧಿಕಾರಿ ಹುದ್ದೆಯಲ್ಲಿ ನೋಡುವುದಕ್ಕೆ ಸಮಾಜ ಒಪ್ಪುತ್ತಿಲ್ಲ. ಗುತ್ತಿಗೆ ಆಧಾರಿತ ಕೆಲಸಕ್ಕೂ ನಮ್ಮನ್ನು ನೇಮಿಸಿಕೊಳ್ಳದಷ್ಟು ದಾರಿದ್ರ್ಯ ಈ ವ್ಯವಸ್ಥೆಗಿದೆ’
-ದಿವ್ಯಾ, ಎಂಎಸ್‌ಡಬ್ಲ್ಯು ಪದವೀಧರೆ
‘ಕಳೆದ 15 ವರ್ಷಗಳಿಂದ ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಇದ್ದೇನೆ. ಸದ್ಯ ವಿದ್ಯಾಸಂಸ್ಥೆಯೊಂದರಲ್ಲಿ ತಾತ್ಕಾಲಿಕ ಹುದ್ದೆಯಲ್ಲಿದ್ದು, ನಮ್ಮ ಕುಟುಂಬದ ಪರಿಸ್ಥಿತಿ ಇಂದಿಗೂ ದುಸ್ತರವಾಗಿಯೇ ಇದೆ. ನಮ್ಮ ತಂದೆ- ತಾಯಿ ನೋವಿನಲ್ಲಿದ್ದು, ಸರಕಾರ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಪೋಷಕರು ನಮಗೆ ಶಿಕ್ಷಣ ಕೊಟ್ಟು ಏನು ಪ್ರಯೋಜನ ಇಲ್ಲದಂತದಾಗಿದೆ’
-ದೀಪಾ, ಎಂಎ ಇಂಗ್ಲೀಷ್, ಬಿಎಡ್ ಪದವಿಧರೆ







