ಉಡುಪಿ | ಲಕ್ಷಕಂಠ ಗೀತಾ ಪಠಣ; ಸಾರ್ವಜನಿಕರಿಗೆ ಮುಕ್ತ ಅವಕಾಶ: ಪುತ್ತಿಗೆ ಶ್ರೀ

ಉಡುಪಿ, ನ.26: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷ್ಣ ಮಠಕ್ಕೆ ಭೇಟಿ ನೀಡಿ, ನಂತರ ಲಕ್ಷಕಂಠ ಗೀತಾ ಪಠಣ ಮಹಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಗಣ್ಯರಿಗೆ ಮಾತ್ರ ಪಾಸ್ ಅಗತ್ಯವಾಗಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಠದ ಗೀತಾ ಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 12 ಗಂಟೆಗೆ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಸಲ್ಲಿಸಲಾಗುತ್ತದೆ. ನಂತರ ಅವರು ಕನಕ ಗುಡಿಯಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿ, ಮಧ್ವ ಸರೋವರದಲ್ಲಿ ಪಾದಪ್ರಾಲನೆ ಮಾಡಿಕೊಂಡು ಮಠದೊಳಗೆ ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನಿ ನೂತನ ಸುವರ್ಣ ತೀರ್ಥ ಮಂಟಪ ಉದ್ಘಾಟಿಸಲಿರುವರು. ಬಳಿಕ ಅವರು ಚಂದ್ರಶಾಲೆಯಲ್ಲಿ ವಿವಿಧ ಮಠಾಧೀಶರ ಆಶೀರ್ವಾದ ಪಡೆಯಲಿದ್ದಾರೆ. ಮೋದಿಯವರು ಸಾಗುವ ದಾರಿಯುದ್ದಕ್ಕೂ ಮಂಗಳವಾದ್ಯಗಳು, ವಿದ್ವಾಂಸರಿಂದ ಭಗವದ್ಗೀತೆ, ವೇದ, ಉಪನಿಷತ್ ಪಾರಾಯಣ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಭಗವದ್ಗೀತೆಯ ಶ್ಲೋಕಗಳನ್ನು ಒಂದು ಲಕ್ಷ ಜನರು ಏಕಕಂಠದಲ್ಲಿ ಪಠಿಸುವ ‘ಲಕ್ಷಕಂಠ ಗೀತೆ’ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ನ.28ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಶ್ರೀಕೃಷ್ಣ ಮಠಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುತ್ತದೆ. ಈ ಹಿನ್ನೆಲೆಯಲ್ಲಿ ದರ್ಶನದ ಸಮಯದಲ್ಲಿ ಭಕ್ತರು ಸಹಕರಿಸಿ, ಪರಿಷ್ಕೃತ ವೇಳಾಪಟ್ಟಿಗೆ ಅನುಸರಿಸಬೇಕು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಠದ ದಿವಾನ್ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.







