ಉಡುಪಿ | ಕೇವಲ ಅಭಿಮಾನದಿಂದ ಭಾಷೆಗಳು ಉಳಿಯಲ್ಲ: ಪ್ರೊ.ಕೆ.ಪಿ.ರಾವ್

ಉಡುಪಿ, ನ.21: ಎಲ್ಲ ಕಾಲದಲ್ಲೂ ಭಾಷೆ ಎಂಬುದು ದುರಾಭಿಮಾನವಾಗಿ ಬಿಡುತ್ತದೆ. ಕೇವಲ ಭಾಷಾ ಅಭಿಮಾನದಿಂದ ಭಾಷೆಗಳು ಉಳಿಯುವುದಿಲ್ಲ. ಅದಕ್ಕೆ ಬೇಕಾದ ಕಾರ್ಯ ಸೃಷ್ಠಿ, ಹೊಸ ಸೃಷ್ಠಿ, ಸಾಹಿತ್ಯ ಸೃಷ್ಠಿಯಾಗಬೇಕು. ಆಗ ಮಾತ್ರ ಭಾಷೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಯಾಕೆಂದರೆ ಭಾಷೆ ಎಂಬುದು ಜೀವ ಇರುವ ವಸ್ತು ಆಗಿದೆ. ಅದು ಕೂಡ ಬೆಳೆಯುತ್ತದೆ, ಸಾಯುತ್ತದೆ, ದಿಕ್ಕು ತಪ್ಪುತ್ತದೆ ಮತ್ತು ದಾರಿಯೂ ತಪ್ಪುತ್ತದೆ ಎಂದು ಹಿರಿಯ ವಿದ್ವಾಂಸ ನಾಡೋಜ ಪ್ರೊ.ಕೆ.ಪಿ.ರಾವ್ ಹೇಳಿದ್ದಾರೆ.
ಸಾಹಿತ್ಯ ಅಕಾಡೆಮಿ ಮತ್ತು ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ’ನಾರಿ ಚೇತನ: ಸಾಹಿತ್ಯದಲ್ಲಿ ಮಹಿಳಾ ಸಂವೇದನೆ’ ಎಂಬ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಎಲ್ಲ ರೀತಿಯ ಜ್ಞಾನ ಭಂಡಾರ ಇರುವುದು ಆಂಗ್ಲ ಭಾಷೆಯಲ್ಲಿ. ನಮ್ಮ ಮಾತೃಭಾಷೆಯೇ ಪರಮೋಚ್ಛಯ ಅದರಿಂದಲೇ ಲೋಕ ಉದ್ಧಾರ ಆಗುತ್ತದೆ ಎಂದು ಭಾವಿಸುವುದು ತಪ್ಪು. ನಮಗೆ ಬೇಕಾದ ಜ್ಞಾನಗಳು, ಜ್ಞಾನ ಭಂಡಾರ, ಲೋಕದ ಎಲ್ಲ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ಸಿಗುವುದು ಬಹುತೇಕ ಇಂಗ್ಲಿಷ್ ಭಾಷೆಯಲ್ಲಿ. ಅದರ ಒಂದು ಅಂಶ ಕೂಡ ಕನ್ನಡ ಸೇರಿದಂತೆ ಭಾರತೀಯ ಯಾವುದೇ ಭಾಷೆಗಳಲ್ಲಿ ಇಲ್ಲ ಎಂದರು.
ಇವತ್ತು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರ ಮಾಡುವಾಗ ಹಲವು ಸಮಸ್ಯೆ ಆಗುತ್ತಿದೆ. ಇದರಿಂದ ತೊಂದರೆಯೂ ಅನುಕೂಲವೂ ಆಗಬಹುದು. ನಮ್ಮ ಸಾಹಿತಿಗಳಿಗೆ ನೋಬೆಲ್ ನಂತಹ ಪ್ರಶಸ್ತಿ ಸಿಗಬೇಕಾದರೆ ಅವರ ಪುಸ್ತಕಗಳು ಆಂಗ್ಲ ಭಾಷೆಗೆ ಅನುವಾದ ಆಗಬೇಕು. ನಾವು ಕನ್ನಡದಲ್ಲಿ ಎಷ್ಟೇ ಬರೆದರೂ ಅದು ಕನ್ನಡಿಗರಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲಿಂದ ಹೊರಗಡೆ ತಲುಪುದಿಲ್ಲ. ನಮ್ಮ ಜ್ಞಾನ ಇನ್ನೊಬ್ಬರಿಗೆ ತಲುಪಬೇಕಾದರೆ ಅವರಿಗೆ ತಿಳಿಯುವ ಭಾಷೆಯಲ್ಲಿ ಬರೆಯಬೇಕಾಗಿದೆ. ಆದರೆ ಇದು ಆಗುತ್ತಿಲ್ಲ. ಇದುವೇ ನಮ್ಮ ದೊಡ್ಡ ಸಮಸ್ಯೆ ಎಂದು ಅವರು ಅಭಿಪ್ರಾಯಪಟ್ಟರು.
ಭಾಷೆಯ ಕುರಿತ ದುರಾಭಿಮಾನವನ್ನು ಬಿಟ್ಟು ಎಲ್ಲ ಭಾಷೆಗಳಲ್ಲಿ ಆದಾರವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ. ಭಾಷೆಗಳು ಉಳಿಯಬೇಕಾದರೆ, ನಮ್ಮ ಮೂಲಭಾಷೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕ್ರಮ ಬದ್ಧ ಚೌಕಟ್ಟು ಹಾಕಿಕೊಂಡು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಡಾ.ಕಾತ್ಯಾಯಿನಿ ಕುಂಜಿಬೆಟ್ಟು ‘ರಂಗಭೂಮಿಯಲ್ಲಿ ಮಹಿಳಾ ಧ್ವನಿ’, ಡಾ.ನಿಕೇತನ ’ತುಳುನಾಡಿನ ಮಹಿಳಾ ಸಾಹಿತ್ಯ’ ಮತ್ತು ಡಾ.ರೇಖಾ ವಿ.ಬನ್ನಾಡಿ ’ಮಹಿಳಾ ಕಾದಂಬರಿಗಳಲ್ಲಿ ಸ್ತ್ರೀವಾದಿ ಚಿಂತನೆ’ ಎಂಬ ವಿಷಯಗಳ ಕುರಿತು ವಿಚಾರಗಳನ್ನು ಮಂಡಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸದಸ್ಯ ಚನ್ನಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಉಡುಪಿ ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕರ್ವಾಲು ಸ್ವಾಗತಿಸಿದರು. ಸತೀಶ್ ಕುಮಾರ್ ಕೊಡವೂರು ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.







