Udupi | ಪ್ರತಿಭೆಗಳ ಸಮರ್ಪಕ ಬಳಕೆಯಿಂದ ನಾಯಕತ್ವ ಪ್ರದರ್ಶನ: ಬಿಷಪ್ ಪೀಟರ್ ಮಚಾದೊ

ಉಡುಪಿ, ಡಿ.7: ಸಮುದಾಯದಲ್ಲಿ ಸಂಘಟಿತರಾಗಿ ತಮ್ಮಲ್ಲಿರುವ ಪ್ರತಿಭೆಗಳನ್ನು ಸಮುದಾಯದ ಏಳಿಗೆಗೆ ಉಪಯೋಗಿಸಿದಾಗ ನಿಜವಾದ ನಾಯಕತ್ವ ತೋರಿಸಿದಂತಾಗುತ್ತದೆ ಎಂದು ಬೆಂಗಳೂರು ಮಹಾಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಪೀಟರ್ ಮಚಾದೋ ಹೇಳಿದ್ದಾರೆ.
ಕಕ್ಕುಂಜೆ ಅನುಗ್ರಹ ಪಾಲನಾಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಸುವಿಚಾರ ಚಿಂತನ-ಮಂಥನ ತಂಡದ ಉದ್ಘಾಟನೆಯನ್ನು ರವಿವಾರ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಮುದಾಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರಲ್ಲಿ ಬೇರೆ ಬೇರೆ ಪ್ರತಿಭೆಗಳಿದ್ದು, ಅಂತಹ ಪ್ರತಿಭೆಗಳನ್ನು ಒಂದೇ ವೇದಿಕೆಯಡಿ ತಂದು ಇದರ ಮೂಲಕ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಚಿಂತನೆಗಳನ್ನು ಮಾಡಿಕೊಂಡು ಅದನ್ನು ಕಾರ್ಯರೂಪಕ್ಕೆ ತಂದಾಗ ಸಮುದಾಯದಲ್ಲಿನ ಪ್ರತಿಯೊಬ್ಬ ಸದಸ್ಯನ ಅಭಿವೃದ್ದಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ಪ್ರಾಂತೀಯ ಹಂತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿರುವ ವ್ಯಕ್ತಿಗಳ ಚಿಂತನ -ಮಂಥನ ತಂಡಗಳನ್ನು ರೂಪಿಸಲಾಗುತ್ತಿದ್ದು, ಉಡುಪಿ ಧರ್ಮಪ್ರಾಂತ್ಯದಲ್ಲಿ ಅತ್ಯುತ್ತಮ ರೀತಿಯಲ್ಲಿ ಸಂಪೂರ್ಣವಾದ ಪೂರ್ವಭಾವಿ ತಯಾರಿಯೊಂದಿಗೆ ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಸೇವೆ ಸುವಿಚಾರ ಚಿಂತನ-ಮಂಥನ ತಂಡದ ಮೂಲಕ ನೀಡುವಂತಾಗಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಯಾವುದೇ ಕೆಲಸಗಳಿಗೆ ಧಾರ್ಮಿಕ ವ್ಯಕ್ತಿಗಳನ್ನೇ ಆಶ್ರಯಿಸಿಕೊಂಡಿರದೇ ಶ್ರೀಸಾಮಾನ್ಯರೂ ಕೂಡ ನಾಯಕತ್ವ ವಹಿಸಿದಾಗ ಅಂತಹ ಕಾರ್ಯಕ್ರಮಕ್ಕೆ ಇನ್ನಷ್ಟು ಮಹತ್ವ ಲಭಿಸುತ್ತದೆ. ಮುಂದಿನ ದಿನಗಳಲ್ಲಿ ಧರ್ಮಪ್ರಾಂತ್ಯ ಮಟ್ಟದ ಸುವಿಚಾರ ಚಿಂತನ-ಮಂಥನ ತಂಡ ಯಶಸ್ವಿಯಾಗಿ ಕಾರ್ಯಾಚರಿಸಲಿ ಎಂದು ಶುಭ ಹಾರೈಸಿದರು
ಕರ್ನಾಟಕ ಪ್ರಾಂತ್ಯದ ಚಿಂತನ-ಮಂಥನ ತಂಡದ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ದಿಕ್ಸೂಚಿ ಭಾಷಣದಲ್ಲಿ ತಂಡದ ಕಾರ್ಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸುವಿಚಾರ ಚಿಂತನ-ಮಂಥನ ತಂಡದಲ್ಲಿ ವಿವಿಧ ಕ್ಷೇತ್ರಗಳಾದ ಮಾಧ್ಯಮ, ವೈದ್ಯಕೀಯ, ಕಾನೂನು, ನರ್ಸಿಂಗ್, ಕೃಷಿ, ಉದ್ಯಮಿಗಳು, ರಾಜಕೀಯ ಮುಖಂಡರು, ಕಲೆ ಮತ್ತು ನಾಟಕ ಕ್ಷೇತ್ರದ ಪ್ರತಿನಿಧಿಗಳು ಒಳಗೊಂಡಿವೆ.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂರ್ಜ್ಞೊ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಶ್ರೀಸಾಮಾನ್ಯ ಆಯೋಗದ ನಿರ್ದೇಶಕ ಡಾ.ಜೆರಾಲ್ಡ್ ಪಿಂಟೊ ವಂದಿಸಿದರು. ಶಿಕ್ಷಣ ಆಯೋಗದ ಕಾರ್ಯದರ್ಶಿ ವಂ.ವಿನ್ಸೆಂಟ್ ಕ್ರಾಸ್ತಾ ಪ್ರಾರ್ಥನಾ ವಿಧಿ ನೆರವೇರಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.







