ಉಡುಪಿ: ಹಿರಿಯ ನಾಗರಿಕರಿಗೆ ಕಾನೂನು ಅರಿವು ಕಾರ್ಯಾಗಾರ

ಉಡುಪಿ: ಮಕ್ಕಳಿಂದ ಪರಿತ್ಯಕ್ತರಾದ, ಆಸ್ತಿ ವಿಚಾರದಲ್ಲಿ ಮೋಸ ಹೋದ ಅಥವಾ ಸೈಬರ್ ವಂಚನೆಗೊಳಗಾದ ಪ್ರಕರಣಗಳಲ್ಲಿ ಹಿರಿಯ ನಾಗರಿಕರು ಕಾನೂನಿನ ನೆರವು ಪಡೆಯಬಹುದು. ಮಕ್ಕಳಿಂದ ತಮ್ಮ ಜೀವನ ನಿರ್ವಹಣೆಯನ್ನು ಬಯಸುವುದು ಪಾಲಕರ ಕಾನೂನುಬದ್ದ ಹಕ್ಕಾಗಿದೆ. ಇದರೊಂದಿಗೆ ಸಮಾಜವೂ ಕೂಡಾ ಹಿರಿಯ ನಾಗರಿಕರ ಬಗ್ಗೆ ಸಹಾನುಭೂತಿ ಹೊಂದಿರಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ ಇವರ ಸಹಯೋಗದೊಂದಿಗೆ ಬ್ರಹ್ಮಗಿರಿಯ ಬಾಲಭವನದಲ್ಲಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳಿಂದ ಪಾಲಕರ ನಿರ್ವಹಣೆಯ ಬಗ್ಗೆ ಸಮಸ್ಯೆಗಳಾದಾಗ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಬಹುದು. ಒಂದು ವೇಳೆ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ದಾನಪತ್ರದ ಮೂಲಕ ಮಕ್ಕಳಿಗೆ ವರ್ಗಾಯಿ ಸಿದ್ದು ಮಕ್ಕಳು ಪಾಲಕರ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ದಾನಪತ್ರವನ್ನು ರದ್ದುಪಡಿಸಿ ಆಸ್ತಿಯನ್ನು ಮರಳಿ ಪಾಲಕರ ಹೆಸರಿಗೆ ವರ್ಗಾಯಿಸಬಹುದಾಗಿದೆ. ಪಾಲಕರು ಯಾವುದೇ ಕಾರಣಕ್ಕೂ ತಮ್ಮ ಜೀವಮಾನದ ಗಳಿಕೆಯನ್ನು ಕಳೆದುಕೊಂಡು ಇನ್ನೊಬ್ಬರ ಮುಂದೆ ಕೈಯೊಡ್ಡು ವಂತಾಗಬಾರದು ಎಂದವರು ಹೇಳಿದರು.
ಹಿರಿಯ ನಾಗರಿಕ ರಕ್ಷಣೆ, ಪಾಲನೆ ಮತ್ತು ಪೋಷಣೆ ನಮ್ಮೆಲ್ಲರ ಕರ್ತವ್ಯ. ಹಿರಿಯ ನಾಗರಿಕರಿಗೆ ಆರ್ಥಿಕ, ದೈಹಿಕ, ಮಾನಸಿಕ ಮತ್ತು ಮನೋ ವೈದ್ಯಕೀಯ ಆರೋಗ್ಯ ಅಗತ್ಯತೆಗಳು ಇತರರಿಗಿಂತ ಹೆಚ್ಚಿರುತ್ತವೆ. ಹಿರಿಯ ನಾಗರಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಅವರ ಅವಶ್ಯಕತೆಗಳನ್ನು ಪೂರೈಸಿ ಗೌರವಯುತ ಬದುಕು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ದಿಶೆಯಲ್ಲಿ ಹಿರಿಯ ನಾಗರಿಕರಿಗಾಗಿ ಜಾರಿಯಾಗಿ ರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರಗಳು ಪರಿಣಾಮಕಾರಿ ಎಂದರು.
ಹಿರಿಯ ನಾಗರಿಕರಿಗಾಗಿ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007ಅನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಸರಕಾರ ಅಟಲ್ ವಯೋ ಅಭ್ಯುದಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯು ವಯೋವೃದ್ಧರು ಗೌರವಯುತ ಮತ್ತು ಗುಣಮಟ್ಟದ ಜೀವನ ನಡೆಸಲು ಸಹಾಯ ಮಾಡುತ್ತದೆ ಎಂದು ಪ್ರತೀಕ್ ಬಾಯಲ್ ತಿಳಿಸಿದರು.
ಕರ್ನಾಟಕ ಲೋಕಾಯುಕ್ತದ ಹಿರಿಯ ಅಧಿಕಾರಿ ಮಂಜುನಾಥ್ ಮಾತನಾಡಿ, ಹಿರಿಯರು ತಮ್ಮ ಜೀವಮಾನದಲ್ಲಿ ಕೂಡಿಟ್ಟ ಹಣ ಸೈಬರ್ ವಂಚಕರ ಪಾಲಾಗದಂತೆ ಜಾಗರೂಕತೆ ವಹಿಸಬೇಕು. ಯಾವುದೇ ಸಂದರ್ಭ ದಲ್ಲೂ ತಮ್ಮ ಬ್ಯಾಂಕ್ ಖಾತೆ ವಿವರ, ಆಧಾರ್, ಪ್ಯಾನ್ ಕಾರ್ಡ್ ವಿವರ, ಒಟಿಪಿಗಳನ್ನು ಯಾರಿಗೂ ನೀಡಬಾರದು. ಡಿಜಿಟಲ್ ಅರೆಸ್ಟ್ ಕರೆಗಳು, ಅನಾಮಿಕ ವಿಡಿಯೋ ಕರೆಗಳು, ಹಣ ಗಳಿಸುವ ಸ್ಕೀಮ್‌ನ ಲಿಂಕ್‌ಗಳು, ಅನುಮಾನಾಸ್ಪದ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು. ಅಶ್ಲೀಲ ಚಿತ್ರ/ವಿಡಿಯೋ ವಿಶೇಷವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ವಿಡಿಯೋಗಳನ್ನು ನೋಡುವುದು ಮತ್ತು ಇತರರಿಗೆ ಹಂಚುವುದು ಶಿಕ್ಷಾರ್ಹ ಅಪರಾಧವಾಗಿದ್ದು ಹಿರಿಯ ನಾಗರಿಕರು ಪ್ರಬುದ್ದತೆಯಿಂದ ವ್ಯವಹರಿಸಬೇಕು. ಜಾತಿ, ಧರ್ಮ, ವ್ಯಕ್ತಿಯ ಘನತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಮಾರಕವಾಗುವ ವಿಚಾರಗಳನ್ನು ಹಂಚಿಕೊಳ್ಳಬಾರದು. ಸೈಬರ್ ವಂಚನೆಗೊ ಳಗಾದಲ್ಲಿ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಅಧ್ಯಕ್ಷತೆ ವಹಿಸಿದ್ದರು. ಎ.ಡಿ.ಎ.ಡಿ.ಎಲ್ ಕಾನೂನು ಸಲಹೆಗಾರ್ತಿ ಭಾನುಮತಿ ಎಂ ನಾಯರಿ ಹಿರಿಯ ನಾಗರಿಕರಿಗೆ ಕಾನೂನು ಸಲಹೆ ಬಗ್ಗೆ, ಸೆನ್ ಪೊಲೀಸ್ ಠಾಣೆಯ ಸೈಬರ್ ಇಕಾನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಕ್ರೈಂ ನ ನೀಲೇಶ್ ಸೈಬರ್ ಮತ್ತು ಡಿಜಿಟಲ್ ವಂಚನೆ ಕುರಿತು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯನಾಗರಿಕರ ರಕ್ಷಣಾ ಕಾಯ್ದೆ-2007 ಕುರಿತು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ರೆಡ್‌ಕ್ರಾಸ್ ಕರ್ನಾಟಕ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೆಚ್. ವಿಶ್ವನಾಥ ಹೆಗ್ಡೆ, ನಾಗರಾಜ್ ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಸ್ತಾವಿಕವಾಗಿ ಮಾತನಾಡಿದರು.ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಯಾ ಸ್ವಾಗತಿಸಿ, ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿ ದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ವಂದಿಸಿದರು.







