ಉಡುಪಿ | ಡಿ.13ರಂದು ಜಿಲ್ಲೆಯ 4 ನ್ಯಾಯಾಲಯಗಳ ಆವರಣದಲ್ಲಿ ಲೋಕ ಅದಾಲತ್

ಉಡುಪಿ, ಡಿ.9: ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನ್ಯಾಯಾಲಯಗಳ ಆವರಣಗಳಲ್ಲಿ ಇದೇ ಡಿ.13ರ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಕಿರಣ್ ಎಸ್.ಗಂಗಣ್ಣವರ್ ತಿಳಿಸಿದ್ದಾರೆ.
ಉಡುಪಿ ನ್ಯಾಯಾಲಯದ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ವಿಲೇವಾರಿ ಮಾಡಿ ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಪರಿಹಾರ ಕಂಡುಕೊಳ್ಳಲು ಇದೊಂದು ಸುವರ್ಣಾವಕಾಶ ಎಂದವರು ಹೇಳಿದರು.
ಜಿಲ್ಲೆಯಲ್ಲಿ 36,568 ಕೇಸುಗಳು ವಿಚಾರಣೆಗೆ ಬಾಕಿ ಇವೆ. ಇವುಗಳಲ್ಲಿ ಸಂಧಾನ ಹಾಗೂ ಮಾತುಕತೆಗಳ ಮೂಲಕ ಇತ್ಯರ್ಥಗೊಳಿಸಬಹುದಾದ 7,534 ಕೇಸುಗಳನ್ನು ಈ ಬಾರಿಯ ಅಲೋಕ ಅದಾಲತ್ ನಲ್ಲಿ ಇತ್ಯರ್ಥ ಪಡಿಸುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ. ತಿಳಿಸಿದರು.
7,534 ಕೇಸುಗಳ ಪೈಕಿ 2,319 ಕೇಸುಗಳಲ್ಲಿ ಮಾತುಕತೆ ನಡೆದು ರಾಜಿಗೆ ಒಪ್ಪಿಗೆ ಸಿಕ್ಕಿದ್ದು, ಎರಡೂ ಕಡೆಯ ಕಕ್ಷಿದಾರರ ಸಮಕ್ಷಮ ಡಿ.13ರಂದು ಅಂತಿಮ ಹಂತದ ಚರ್ಚೆ ನಡೆದು ಒಮ್ಮತಕ್ಕೆ ಬರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಈ ವರ್ಷ ನಡೆಯುತ್ತಿರುವ ನಾಲ್ಕನೇ ಲೋಕ ಅದಾಲತ್ ಇದಾಗಿದ್ದು, ಹಿಂದಿನ ಮೂರು ಲೋಕ ಅದಾಲತ್ ಗಳಲ್ಲಿ ಒಟ್ಟು 12,514 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 10,586 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಪರಿಹಾರ ನೀಡಲಾಗಿದೆ ಎಂದು ನ್ಯಾ.ಕಿರಣ್ ಗಂಗಣ್ಣವರ್ ತಿಳಿಸಿದರು.
ಮಾರ್ಚ್ 8ರಂದು ನಡೆದ ಲೋಕಅದಾಲತ್ ನಲ್ಲಿ 3,399 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ಇವುಗಳಲ್ಲಿ 2,802ಕ್ಕೆ ಪರಿಹಾರವನ್ನು ದೊರಕಿಸಿ ಕೊಡಲಾಗಿದೆ. ಅದೇ ರೀತಿ ಜುಲೈ 12ರಂದು ನಡೆದ ಎರಡನೇ ಲೋಕಅದಾಲತ್ನಲ್ಲಿ 4,626 ಕೇಸುಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳಲ್ಲಿ 3,909 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ಪರಿಹಾರ ಕಂಡು ಕೊಳ್ಳಲಾಗಿದೆ ಎಂದರು.
ಸೆಪ್ಟಂಬರ್ ತಿಂಗಳ 13ರಂದು ನಡೆದ ಮೂರನೇ ಲೋಕಅದಾಲತ್ನಲ್ಲಿ 4,501 ಕೇಸುಗಳನ್ನು ಪರಿಗಣಿಸಿದ್ದು, ಇವುಗಳಲ್ಲಿ 3,887 ಕೇಸುಗಳಿಗೆ ಪರಿಹಾರವನ್ನು ನೀಡಲಾಗಿದೆ. ಒಟ್ಟು ಸುಮಾರು 9.83 ಕೋಟಿ ರೂ. ಪರಿಹಾರವನ್ನೂ ವಿತರಿಸಲಾಗಿದೆ ಎಂದೂ ನ್ಯಾ.ಗಂಗಣ್ಣವರ್ ತಿಳಿಸಿದರು.
ಶನಿವಾರ ನಡೆಯುವ ಈ ವರ್ಷದ ನಾಲ್ಕನೇ ಲೋಕಅದಾಲತ್ನಲ್ಲಿ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಎಂಎಂಡಿಆರ್ ಪ್ರಕರಣ, ಚೆಕ್ಕು ಅಮಾನ್ಯದ ಪ್ರಕರಣಗಳು, ಬ್ಯಾಂಕ್ ಸಾಲದ ವಸೂಲಾತಿ ಪ್ರಕರಣಗಳು, ಮೋಟಾರು/ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು ಎಂದು ಮನು ಪಟೇಲ್ ತಿಳಿಸಿದರು.
ಅಲ್ಲದೇ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಮತ್ತು ನೀರಿನ ಶುಲ್ಕಗಳು, ವಿಚ್ಛೇಧನ ವನ್ನು ಹೊರತು ಪಡಿಸಿದ ವೈವಾಹಿಕ/ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಭೂ ಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳೊಂದಿಗೆ ಸಿವಿಲ್ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು.
ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶ ನೀಡಲಾಗುವುದು. ಪ್ರಕರಣದ ಇತ್ಯರ್ಥಕ್ಕೆ ಉಭಯ ಕಕ್ಷಿದಾರರ ಉಪಸ್ಥಿತಿ ಕಡ್ಡಾಯವಾಗಿದೆ. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನಗೊಳ್ಳುವುದಿಂದ ಸೌಹಾರ್ದತೆ ಉಳಿಯಲು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ನ್ಯಾಯಾಲಗಳಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುವುದು ಎಂದು ಮನು ಪಟೇಲ್ ತಿಳಿಸಿದರು.







