ಉಡುಪಿ | ಬೀಡಿ ಕಾರ್ಮಿಕರ ಸಮಸ್ಯೆಯ ಕುರಿತು ಸಚಿವರಿಂದ ಸಭೆ

ಉಡುಪಿ, ನ.28: ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ಬೀಡಿ ಕಾರ್ಮಿಕರ ಸಮಸ್ಯೆಯ ಕುರಿತು ಸಭೆ ನಡೆಯಿತು.
2018ರಿಂದ 2024 ರವರಗಿನ ಬಾಕಿ ಉಳಿಸಿರುವ ವೇತನ, 1.4.2024 ರಿಂದ ಜಾರಿಯಾಗಬೇಕಿದ್ದ ಸರಕಾರ ಆದೇಶಿರುವ ಕಾನೂನು ಬದ್ದ ಕನಿಷ್ಟ ಕೂಲಿ ಜಾರಿಗೆ ಆಗ್ರಹಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದ ಪರಿಣಾಮವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬೆಂಗಳೂರು ವಿಕಾಸ ಸೌಧದಲ್ಲಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದರು.
ಮಾಲಕರ ಸಂಘದ ಪ್ರತಿನಿಧಿಗಳು ಆಹ್ವಾನದ ಹೊರತಾಗಿಯು ಸಭೆಯಲ್ಲಿ ಭಾಗವಹಿಸಲಿಲ್ಲ. ಕಾರ್ಮಿಕರನ್ನು ಪ್ರತಿನಿಧಿಸಿ ಸಭೆಯಲ್ಲಿ ಭಾಗವಹಿಸಿದ ಸಿಐಟಿಯು ನಾಯಕರು ಮಾಲಕರು ಸರಕಾರದ ಆದೇಶ ಜಾರಿಗೊಳಿಸದೆ ಕಾರ್ಮಿಕರಿಗೆ ನಡೆಸಿರುವ ಬಾಕಿ ವೇತನ, ಕನಿಷ್ಟ ಕೂಲಿ ವಂಚನೆಯನ್ನು ವಿವರವಾಗಿ ಸಭೆಗೆ ಮಂಡಿಸಿದರು, ನ್ಯಾಯ ಒದಗಿಸುವಂತೆ ಸಚಿವರಲ್ಲಿ ವಿನಂತಿಸಿದರು.
ಕಾರ್ಮಿಕ ನಾಯಕರು ನೀಡಿದ ಅಂಕಿ ಅಂಶಗಳನ್ನು ಒಳಗೊಂಡ ವಿವರವಾದ ಮಾಹಿತಿಯನ್ನು ಪಡೆದ ಸಚಿವರು, ಅವುಗಳ ಆಧಾರದಲ್ಲಿ ಬೀಡಿ ಉದ್ಯಮದ ಸಮಗ್ರ ಮಾಹಿತಿಗಳನ್ನು ಕಲೆ ಹಾಕುವಂತೆ, ಅವುಗಳ ಆಧಾರದಲ್ಲಿ ಮಾಲಕರಿಗೆ ಪತ್ರ ರವಾನಿಸುವಂತೆ, ಡಿಸೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆಗೆ ಸಮಯ ನಿಗದಿ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ನ.29ರಂದು ಮಂಗಳೂರಿನಲ್ಲಿ ನಡೆಯುವ ಬೀಡಿ ಕಾರ್ಮಿಕರ ಪ್ರತಿಭಟನಾ ಸಭೆಗೆ ತೆರಳಿ ಕಾರ್ಮಿಕರೊಂದಿಗೆ ಮಾತನಾಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕಾರ್ಮಿಕ ಮುಖಂಡರ ನೇತೃತ್ವವನ್ನು ಸಿಐಟಿಯು ರಾಜ್ಯ ಅಧ್ಯಕ್ಷ ಮೀನಾಕ್ಷಿ ಸುಂದರಂ ವಹಿಸಿದ್ದರು. ಬೀಡಿ ಕಾರ್ಮಿಕರ ರಾಜ್ಯ ಫೆಡರೇಷನ್ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಮುಜೀಬ್, ಜಿಲ್ಲಾ ಪ್ರಮುಖರಾದ ಸುಕುಮಾರ್ ತೊಕ್ಕೊಟ್ಟು, ಬಿ.ಎಂ.ಭಟ್, ಮುನೀರ್ ಕಾಟಿಪಳ್ಳ, ಕವಿರಾಜ್ ಕಾಂಚನ್ ಉಡುಪಿ, ಫಾರೂಕ್ ಮಡಂಜೋಡಿ, ಧನಂಜಯ ಪಟ್ರಮೆ ಉಪಸ್ಥಿತರಿದ್ದರು.







