ವಿಶ್ವದ ಅಗ್ರ ’ಹಸಿರು ಆಸ್ಪತ್ರೆಗಳ ಪಟ್ಟಿಯಲ್ಲಿ ಉಡುಪಿ ಮಿಷನ್ ಆಸ್ಪತ್ರೆ

ಉಡುಪಿ, ಸೆ.10: ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆಯು ಪರಿಸರ ಸುಸ್ಥಿರತೆಯಲ್ಲಿ ವಿಶ್ವದ ಅಗ್ರ ಆಸ್ಪತ್ರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಜಾಗತಿಕ ಸಂಶೋಧನೆ ಮತ್ತು ದತ್ತಾಂಶ ಸಂಸ್ಥೆಯಾದ ಸ್ಪಾಟಿಸ್ಟಾ ಸಹಯೋಗದೊಂದಿಗೆ ನ್ಯೂಸ್ವೀಕ್ ಪ್ರಕಟಿಸಿ ರುವ ‘ವರ್ಲ್ಡ್ ಗ್ರೀನೆಸ್ಟ್ ಹಾಸ್ಪಿಟಲ್ಸ್ -2026’ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಪತ್ರೆಯು ’4-ಎಲೆಗಳ’ ರೇಟಿಂಗ್ ಗಳಿಸಿದೆ. 36 ದೇಶಗಳ 4000ಕ್ಕೂ ಅಧಿಕ ಆಸ್ಪತ್ರೆಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಆಯ್ಕೆ ಮಾಡಲಾದ ವಿಶ್ವದಾ ದ್ಯಂತ 250 ಆರೋಗ್ಯ ಸಂಸ್ಥೆಗಳನ್ನು ಈ ಶ್ರೇಯಾಂಕ ಒಳಗೊಂಡಿದೆ.
ಏಷ್ಯಾ-ಪ್ಯಾಸಿಫಿಕ್ ಪ್ರದೇಶದ ಕೇವಲ 46 ಆಸ್ಪತ್ರೆಗಳು ಹಾಗೂ ಭಾರತದಲ್ಲಿನ 8 ಆಸ್ಪತ್ರೆಗಳು ಮಾತ್ರ ಈ ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವುದರಿಂದ, ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಗೆ ಈ ಸಾಧನೆಯು ವಿಶೇಷ ಮಹತ್ವದ್ದಾಗಿದೆ.
ಉಡುಪಿಯಂತಹ ದ್ವಿತೀಯ ಶ್ರೇಣಿಯ ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಯೊಂದಕ್ಕೆ ಇದು ಗಮನಾರ್ಹ ಜಾಗತಿಕ ಮನ್ನಣೆಯಾಗಿದೆ. ನ್ಯೂಸ್ ವೀಕ್ ಜಾಗತಿಕ ವ್ಯಾಪ್ತಿಯನ್ನು ಹೊಂದಿರುವ ಪ್ರಮುಖ ಅಂತಾರಾಷ್ಟ್ರೀಯ ಸುದ್ದಿ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮ ಸಂಸ್ಥೆಯಾಗಿದೆ.
ಆರೋಗ್ಯ ಕ್ಷೇತ್ರವು ಪರಿಸರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದ್ದು, ಜಾಗತಿಕ ಹಸಿರುಮನೆ ಅನಿಲಗಳ ಒಟ್ಟು ಹೊರ ಸೂಸುವಿಕೆಯಲ್ಲಿ ಅಂದಾಜು 4.5ರಿಂದ 5 ಪ್ರತಿಶತದಷ್ಟು ಪಾಲು ಹೊಂದಿದೆ. ಆಸ್ಪತ್ರೆಗಳು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಮತ್ತು ನೀರನ್ನು ಬಳಸುವುದರ ಜೊತೆಗೆ ಗಣನೀಯ ಪ್ರಮಾಣದ ತ್ಯಾಜ್ಯವನ್ನು ಉತ್ಪಾದಿಸು ತ್ತವೆ. ಹೀಗಾಗಿ ಜವಾಬ್ದಾರಿಯುತ ಆರೋಗ್ಯ ಸೇವೆ ಒದಗಿಸುವಲ್ಲಿ ಪರಿಸರ ಜವಾಬ್ದಾರಿಯು ದಿನೇದಿನೇ ಮಹತ್ವ ಪಡೆಯುತ್ತಿದೆ.
ಹಸಿರು ಆರೋಗ್ಯ ಸೇವಾ ಪದ್ಧತಿಗಳಲ್ಲಿ ನಿಗದಿತ ಮಾನದಂಡಗಳನ್ನು ಪೂರೈಸುವ ಆಸ್ಪತ್ರೆಗಳನ್ನು 4-ಎಲೆಗಳ ರೇಟಿಂಗ್ ಮೂಲಕ ಗುರುತಿಸಲಾಗಿದೆ. ಮೌಲ್ಯಮಾಪನದಲ್ಲಿ ಸುಸ್ಥಿರತೆಗೆ ಸಂಬಂಧಿಸಿದ ದತ್ತಾಂಶ, ತಜ್ಞರ ಅಭಿಪ್ರಾಯಗಳು, ಪ್ರಮಾಣೀಕರಣಗಳು ಮತ್ತು ಮಾನ್ಯತೆಗಳು, ಪರಿಸರ ಕ್ಷೇತ್ರದಲ್ಲಿನ ಸಾಧನೆಗಳು, ಬದ್ಧತೆಗಳು ಮತ್ತು ಘೋಷಣೆಗಳು ಹಾಗೂ ಸುಸ್ಥಿರತಾ ವರದಿಗಳ ಪಾರದರ್ಶಕತೆ ಮೊದಲಾದ ಅಂಶಗಳನ್ನು ಪರಿಗಣಿಸಲಾಗಿದೆ.
ಲೊಂಬಾರ್ಡ್ ಆಸ್ಪತ್ರೆಯು ಅತ್ಯುತ್ತಮ ಹಸಿರು ಇಂಧನ ದಕ್ಷತಾ ಕ್ರಮಗಳಿಗಾಗಿ 2026ರ ಹೆಲ್ಸ್ ಸುಸ್ಥಿರತಾ ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿರುವ ಬೆನ್ನಲ್ಲೇ ಈ ಮನ್ನಣೆ ದೊರೆತಿದ್ದು, ಸುಸ್ಥಿರ ಆರೋಗ್ಯ ಸೇವೆಯಲ್ಲಿ ಆಸ್ಪತ್ರೆಯ ಪ್ರಯತ್ನಗಳಿಗೆ ಮತ್ತಷ್ಟು ಗುರುತನ್ನು ನೀಡಿದೆ.
ಆಸ್ಪತ್ರೆಯ ಪರಿಸರ ಸ್ನೇಹಿ ಉಪಕ್ರಮಗಳನ್ನು ನಿರ್ದೇಶಕ ಡಾ.ಸುಶಿಲ್ ಜತನ್ನಾ ನೇತೃತ್ವದಲ್ಲಿ 2024ರಲ್ಲಿ ಆರಂಭಿಸಲಾದ ’ಇನ್‌ಸ್ಪೈರ್’ ಹಸಿರು ಆಸ್ಪತ್ರೆ ಯೋಜನೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆ ಯಡಿ ಆಸ್ಪತ್ರೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸ ಲಾಗಿದ್ದು, ಕಾರ್ಬನ್ ಹೆಜ್ಜೆಗುರುತು ಮೌಲ್ಯಮಾಪನ ನಡೆಸಲಾಗಿದೆ. ಇಂಧನ ಹಾಗೂ ನೀರಿನ ಸಂರಕ್ಷಣಾ ಕ್ರಮಗಳನ್ನು ಜಾರಿಗೊಳಿಸುವುದರ ಜೊತೆಗೆ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆಯನ್ನು ಬಲಪಡಿಸಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಹಸಿರೀಕರಣ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಉತ್ತೇಜನ ನೀಡಲಾಗಿದ್ದು, ಹವಾಮಾನ ಬದಲಾವಣೆ ಹಾಗೂ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಮಟ್ಟದಲ್ಲಿ ನಡೆಸಿದ ನಿರಂತರ ಪ್ರಯತ್ನಗಳು ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಬಲ್ಲವು ಎಂಬುದಕ್ಕೆ ಈ ಮನ್ನಣೆಯು ವಿಶೇಷವಾಗಿ ಉತ್ತೇಜನಕಾರಿಯಾಗಿದೆ ಎಂದು ಡಾ.ಜತನ್ನಾ ತಿಳಿಸಿದ್ದಾರೆ.






