UDUPI | ತಲೆಗೆ ಚೊಂಬು ಸಿಲುಕಿ ಒದ್ದಾಡುತ್ತಿದ್ದ ಕೋತಿಯ ರಕ್ಷಣೆ: ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ

ಉಡುಪಿ: ಕಳೆದ ಎರಡು ಮೂರು ದಿನಗಳಿಂದ ಚೊಂಬು ತಲೆಗೆ ಸಿಲುಕಿಕೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೋತಿಯೊಂದನ್ನು ಸ್ಥಳೀಯರು ರಕ್ಷಿಸಿದ ಘಟನೆ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ಎಂಬಲ್ಲಿ ಇಂದು ನಡೆದಿದೆ.
ಪರಿಸರದಲ್ಲಿ ಚೊಂಬು ತಲೆಗೆ ಹಾಕಿಕೊಂಡು ಒದ್ದಾಡುತ್ತಿದ್ದ ಮಂಗವನ್ನು ಸ್ಥಳಿಯ ಸಮಾಜ ಸೇವಕರು ಮತ್ತು ಪರಿಸರ ಪ್ರೇಮಿ ನವೀನ್ ಕುಮಾರ್ ಚಿತ್ರಬೈಲ್, ಸುಕೇಶ್, ಹರೀಶ ರಾಮ ಮತ್ತು ವಿಶ್ವನಾಥ ಎಂಬವರು ಗಮನಿಸಿದರು.
ಕೂಡಲೇ ಕಾರ್ಯಪ್ರವೃತ್ತರಾದ ಅವರು ಕೋತಿಯನ್ನು ಹಗ್ಗ ಕಟ್ಟಿ ಹಿಡಿದು, ಚಿತ್ರಬೈಲು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪರಿಸರಕ್ಕೆ ಕೊಂಡೊಯ್ದಿದ್ದಾರೆ. ಕೋತಿಯ ತಲೆಯನ್ನು ನೀರಿನಲ್ಲಿ ಒದ್ದೆ ಮಾಡಿ ಬಳಿಕ ನಾಜೂಕಾಗಿ ಚೊಂಬನ್ನು ತಲೆಯಿಂದ ಬೇರ್ಪಡಿಸಿದ್ದಾರೆ.
ಚೊಂಬು ತೆಗೆದ ತಕ್ಷಣ ಬದುಕಿದೆಯೋ ಬಡ ಜೀವ ಎಂಬಂತೆ ಕೋತಿ ಜಿಗಿದು ಓಡಿ ಪರಾರಿಯಾಗಿದೆ. ಸ್ಥಳೀಯ ಯುವಕರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Next Story







