ಉಡುಪಿ ನಗರಸಭೆಯಲ್ಲಿ ಮಳೆಯ ಆವಾಂತರದ ಗದ್ದಲ
ತೋಡಿನ ಹೂಳೆತ್ತದ ಬಗ್ಗೆ ಸದಸ್ಯರ ಆಕ್ರೋಶ : ಕೂಡಲೇ ಕ್ರಮಕ್ಕೆ ಆಗ್ರಹ

ಉಡುಪಿ : ನಗರದ ತೋಡುಗಳ ಹೂಳೆತ್ತದ ಪರಿಣಾಮ ಈ ಬಾರಿಯ ಒಂದೇ ಮಳೆಗೆ ಸಮಸ್ಯೆಗಳಾಗಿರುವ ಬಗ್ಗೆ ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲ ಚರ್ಚೆಗಳು ನಡೆದವು. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸದಸ್ಯರು ಆರೋಪಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ವಿಜಯ ಕೊಡವೂರು, ಪ್ರತಿಬಾರಿ ಎರಡು ತಿಂಗಳ ಮೊದಲೇ ತೋಡುಗಳ ಹೂಳೆತ್ತುವ ಕಾರ್ಯ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಎಲ್ಲ ತೋಡುಗಳ ಹೂಳು ತೆಗೆಯದ ಪರಿಣಾಮ ಈ ಬಾರಿಯ ಮಳೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ಸದಸ್ಯ ಮಾನಸಿ ಪೈ ಮಾತನಾಡಿ, ಉಡುಪಿ ಶ್ರೀಕೃಷ್ಣ ಮಠದಲ್ಲಿ ತೋಡಿನ ಮೇಲೆ ಅಕ್ರಮ ಕಟ್ಟಡ ನಿರ್ಮಿಸಿದ ಪರಿಣಾಮ ತೆಂಕಪೇಟೆ ಹಾಗೂ ಕುಂಜಿ ಬೆಟ್ಟು ವಾರ್ಡ್‌ಗಳಲ್ಲಿ ನೆರೆ ಭೀತಿ ಆವರಿಸಿದೆ. ಕೂಡಲೇ ನೀರು ಹೋಗಲು ತೋಡು ತೆರವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದೇ ರೀತಿ ಸುಂದರ ಕಲ್ಮಾಡಿ, ಗಿರೀಶ್ ಅಂಚನ್ ಅಮೃತಾ ಕೃಷ್ಣಮೂರ್ತಿ, ಕೃಷ್ಣರಾಜ ಕೊಡಂಚ ತೋಡು ಹೂಳೆತ್ತದ ಸಮಸ್ಯೆ ಬಗ್ಗೆ ಸಭೆಯ ಗಮನ ಸೆಳೆದರು.
ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ತಿಂಗಳಿಗೆ ಮೂರು ಬಾರಿ ಸಭೆ ಕರೆಯುವ ಶಾಸಕರು, ಅಧ್ಯಕ್ಷರಿಗೆ ಅಧಿಕಾರಿಗಳಲ್ಲಿ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ದೂರಿದರು. ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಳೆಯ ಆವಾಂತರಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಚರಂಡಿ ಮೇಲೆಯೇ ಕಂಪೌಂಡ್ ಹಾಲ್ ನಿರ್ಮಿಸಲು ಇವರು ಅವಕಾಶ ಮಾಡಿಕೊಟ್ಟಿದ್ದಾರೆ. ಕೂಡಲೇ ಅಕ್ರಮ ಕಟ್ಟಡ ಗಳನ್ನು ತೆರವುಗೊಳಿಸಿ ನೀರು ಹರಿಯುವಂತೆ ಮಾಡಬೇಕು ಎಂದರು.
ಮಳೆಯಿಂದ ಹೂಳೆತ್ತಲು ಅಡ್ಡಿ:
ನಗರಸಭೆ ಸಹಾಯಕ ಕಾರ್ಯ ನಿರ್ವಹಕ ಇಂಜಿನಿಯರ್ ದುರ್ಗಾ ಪ್ರಸಾದ್ ಮಾತನಾಡಿ, ನಗರದ ಕಲ್ಸಂಕ ಸೇರಿದಂತೆ ದೊಡ್ಡ ತೊಡುಗಳ ಹೂಳನ್ನು ಎರಡು ವರ್ಷಗಳಿಗೊಮ್ಮೆ ತೆಗೆಯುವುದು ವಾಡಿಕೆ. ಆದರೂ ಈ ಬಾರಿ ಕಲ್ಸಂಕ ತೋಡಿನ ಹೂಳನ್ನು ತೆಗೆಯಲು ಟೆಂಡರ್ ಕರೆದು ಕಾಮಗಾರಿ ಆರಂಭಿಸಿದ್ದೇವೆ. ಇದೀಗ ಶೇ.80ರಷ್ಟು ಹೂಳು ತೆಗೆಯಲಾಗಿದೆ. ಅದೇ ರೀತಿ ರಸ್ತೆಯ ಬದಿಯ ಚರಂಡಿ ಹೂಳನ್ನು ಕೂಡ ತೆಗೆಯಲಾಗುತ್ತಿತ್ತು. ಆದರೆ ಅವಧಿಗೆ ಮೊದಲೇ ಮಳೆ ಬಂದ ಪರಿಣಾಮ ಹೂಳು ತೆಗೆಯಲು ಸಾಧ್ಯವಾಗಿಲ್ಲ ಎಂದರು.
ಪೌರ ಕಾರ್ಮಿಕರು ರಜೆ ಮಾಡುತ್ತಿರುವುದರಿಂದ 100ರಲ್ಲಿ ಕೇವಲ 40-45 ಮಂದಿ ಮಾತ್ರ ಸಿಗುತ್ತಾರೆ. ಇದರಿಂದ ತೋಡಿನ ಹೂಳು ತೆಗೆಯಲು ವಿಳಂಬವಾಗುತ್ತಿದೆ. ಇದೀಗ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾದ ಕಾರ್ಮಿಕರಿಂದ ನಾವು ಕೆಲಸ ಮಾಡಿಸುತ್ತಿದ್ದೇವೆ ಎಂದು ಪರಿಸರ ಇಂಜಿನಿಯರ್ ಸಭೆಗೆ ತಿಳಿಸಿದರು.
ಆಡಳಿತ ಪಕ್ಷದ ಸದಸ್ಯ ಗಿರೀಶ್ ಅಂಚನ್ ಮಾತನಾಡಿ, ಪೌರ ಕಾರ್ಮಿಕರ ಸಂಬಳ ಹಾಗೂ ಇತರ ಬೇಡಿಕೆಗಳಿಗೆ ನಾವು ಸ್ಪಂದಿಸಬೇಕು. ಆದರೆ ಅವರು ನಮ್ಮ ಕೆಲಸಕ್ಕೆ ಬಳಕೆಯಾಗುತ್ತಿಲ್ಲ. ಊಟಕ್ಕಿಲ್ಲ ಉಪ್ಪಿನ ಕಾಯಿ ನಮಗೆ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಕಟ್ಟಡ ತೆರವು :
ಸದಸ್ಯ ಬಾಲಕೃಷ್ಣ ಶೆಟ್ಟಿ ಮಾತನಾಡಿ, ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದು, ಪೌರಾಯುಕ್ತರು ಎರಡು ದಿನಗಳೊಳಗೆ ತೆರವುಗೊಳಿಸುವುದಾಗಿ ತಿಳಿಸಿದರು.
ಮಳೆಯಿಂದಾಗಿ ಆದಿ ಉಡುಪಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ರಮೇಶ್ ಕಾಂಚನ್ ಆರೋಪಿಸಿದರು. ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸಮಸ್ಯೆ ಆಗಿದೆ. ತಕ್ಷಣ ದುರಸ್ತಿ ಕಾರ್ಯ ಮಾಡಲು ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಕ್ರಿಯಾಯೋಜನೆ ತಯಾರಿಸುವಾಗ ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರ ವಾರ್ಡಿಗೆ ಯಾವುದೇ ಅನುದಾನ ನೀಡದೆ ತಾರತಮ್ಯ ಎಸಗಲಾಗಿದೆ ಎಂದು ರಮೇಶ್ ಕಾಂಚನ್ ದೂರಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಅನುದಾನ ನೀಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
ಮುಂದಿನ ಬಾರಿ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಅನುದಾನ ನೀಡುವ ಬಗ್ಗೆ ಸರ್ವ ಸದಸ್ಯರು ಉಸ್ತುವಾರಿ ಸಚಿವರನ್ನು ಭೇಟಿ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ನಗರಸಭೆಯಿದ 50 ಲಕ್ಷ ರೂ. ಹಣವನ್ನು ಪರ್ಯಾಯ ವಿದ್ಯುತ್ ಆಲಂಕಾರಕ್ಕೆ ಮೀಸಲಿರಿಸುವಂತೆ ಶಾಸಕರು ಸಲಹೆ ನೀಡಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪೌರಾಯುಕ್ತ ಮಹೇಶ್ ಉಪಸ್ಥಿತರಿದ್ದರು.
ಸದಸ್ಯರ ಮಧ್ಯೆ ಮಾತಿನ ಚಕಮಕಿ :
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಗಾಳಿಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿದರೂ, ಸಚಿವರು ಜಿಲ್ಲೆಗೆ ಆಗಮಿಸಿಲ್ಲ ಎಂಬ ಆಡಳಿತ ಪಕ್ಷದ ಸದಸ್ಯರ ಆರೋಪ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ವಿದ್ಯುತ್ ಸಮಸ್ಯೆ ಕುರಿತ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯ ಗಿರೀಶ್ ಅಂಚನ್, ಕಾಂಗ್ರೆಸ್ ಸರಕಾರಕ್ಕೆ ಕರೆಂಟ್ ಕೊಡುವ ಯೋಗ್ಯತೆ ಇಲ್ಲ. ಉಚಿತ ಯೋಜನೆ ನೀಡಿ ಸರಕಾರ ದಿವಾಳಿಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಆಕ್ರೋಶಗೊಂಡ ವಿಪಕ್ಷ ನಾಯಕ ರಮೇಶ್ ಕಾಂಚನ್, ಆಡಳಿತ ಪಕ್ಷದ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು.
ಉಡುಪಿ ಜಿಲ್ಲೆಗೆ ಗ್ಯಾರಂಟಿ ಯೋಜನೆ ಬೇಡವಾದರೆ ನೀವು ಬರೆದುಕೊಡಿ. ನಿಮ್ಮ ಸರಕಾರ ಇರುವಾಗ ಬಡವರಿಗೆ ಸಹಾಯ ಮಾಡಲು ಯೋಗ್ಯತೆ ಇರಲಿಲ್ಲ. ಈಗ ನಮ್ಮ ಸರಕಾರ ಗ್ಯಾರಂಟಿ ಯೋಜನೆ ನೀಡುತ್ತಿರುವುದನ್ನು ನಿಮ್ಮಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ಟೀಕಿಸಿದರು. ಇದರಿಂದ ಸದಸ್ಯರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆದು ಸಭೆ ಸಂಪೂರ್ಣ ಗದ್ದಲಮಯವಾಯಿತು.







